ದೇಶದಲ್ಲಿ ಸುದ್ದಿಕಳ್ಳತನ ನಡೆಯುತ್ತಿದೆ: ಪತ್ರಕರ್ತ ಸಿದ್ಧಾರ್ಥ್ ವರದರಾಜನ್
► “ಸುದ್ದಿಯ ʼಯುದ್ಧಭೂಮಿʼಯಲ್ಲಿ ಮುಖ್ಯವಾಹಿನಿಗಳು ದೂರ ಉಳಿದಿವೆ” ► 'ವಾರ್ತಾಭಾರತಿ'ಯ ಕಲ್ಯಾಣ ಕರ್ನಾಟಕ ಆವೃತ್ತಿ ಲೋಕಾರ್ಪಣೆ
ಕಲಬುರಗಿ : ಮತಗಳ್ಳತನದ ಪದ ಬಹಳ ಹೆಚ್ಚಾಗಿ ಕೇಳಿ ಬರುತ್ತದೆ. ಮತಗಳ್ಳತನ ಆಗುತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಅದಕ್ಕೆ ಮುಂಚಿತವಾಗಿ ಸುದ್ದಿಕಳ್ಳತನ ಈ ದೇಶದಲ್ಲಿ ನಡೆದಿದೆ. 2014ರಿಂದ ಇದು ದೇಶದಲ್ಲಿ ಪ್ರಾರಂಭವಾಗಿದೆ. ಜನರಿಂದ ಸುದ್ದಿಯನ್ನು ದೂರ ಇಡುವ ಕೆಲಸ ನಡೆಯುತ್ತಿದೆ. ಜನರಿಗೆ ಬೇಕಾದ ಸುದ್ದಿ ದೂರ ಇಡುವ ಕೆಲಸ ನಡೆಯುತ್ತಿತ್ತು. ನಮ್ಮ ನಾಯಕರ ಬಳಿ ಜನರ ಸಮಸ್ಯೆಗಳನ್ನು ಕೊಂಡೊಯ್ಯಲು ಕಷ್ಟವಾಗುತ್ತಿದೆ, ಮುಖ್ಯವಾಹಿನಿಗಳು ಮಾಯವಾಗುತ್ತಿದೆ ಎಂದು thewire.in ನ ಸಂಪಾದಕ ಸಿದ್ದಾರ್ಥ್ ವರದರಾಜನ್ ಹೇಳಿದರು.
ಕಲಬುರಗಿಯಲ್ಲಿ ಶನಿವಾರ ʼವಾರ್ತಾಭಾರತಿʼ ಪತ್ರಿಕೆಯ ಕಲ್ಯಾಣ ಕರ್ನಾಟಕ ಆವೃತ್ತಿಯ ಬಿಡುಗಡೆ ಮಾಡಿ ಮಾತನಾಡಿದ ಸಿದ್ದಾರ್ಥ್ ವರದರಾಜನ್, ಸುದ್ದಿಯ ಯುದ್ದಭೂಮಿಯಲ್ಲಿ ದೊಡ್ಡ ಮಾಧ್ಯಮಗಳು ಜನರಿಗೆ ತಲುಪಬೇಕಾದ ಸುದ್ದಿ ತಲುಪಿಸದೇ ದೂರ ಉಳಿದವು. ಅವೆಲ್ಲವೂ ಅಗತ್ಯ ವಿರುವ ಸಂದರ್ಭದಲ್ಲಿ ದೂರ ಇದ್ದಾಗ, ಹೊಸ ಮಾಧ್ಯಮಗಳ ಉದಯ ಅವಶ್ಯಕ. ಈ ಮಾಧ್ಯಮಗಳು ಸಣ್ಣವೂ ಆಗಿರಬಹುದು. ವಾರ್ತಾಭಾರತಿ ಆ ರೀತಿಯ ಒಂದು ಸಣ್ಣ, ಸ್ವತಂತ್ರ ಮಾದ್ಯಮ. ದೊಡ್ಡ ಮಾಧ್ಯಮಗಳು ಈ ದೇಶದ ಜನರ ಜೀವನ, ಸಂಸ್ಕೃತಿ, ಪ್ರಜಾಪ್ರಭುತ್ವವನ್ನು ನಾಶ ಮಾಡಲು ಕೆಲಸ ಮಾಡುತ್ತಿವೆ. ಚಿಕ್ಕವಾದರೂ ಸ್ವತಂತ್ರ ಪತ್ರಿಕೋದ್ಯಮ ಪ್ರಬಲ ಪ್ರತಿರೋಧ ತೋರುತ್ತಿವೆ. ಮೊದಲು ಮಂಗಳೂರಿನಲ್ಲಿ ಹುಟ್ಟಿ ಈಗ ಕಲ್ಯಾಣ ಕರ್ನಾಟಕದಲ್ಲೂ ವಾರ್ತಾಭಾರತಿ ಆವೃತಿ ಪ್ರಾರಂಭಿಸಿದೆ. ನಾವೀಗ ಒಂಟಿಯಲ್ಲ, ವಾರ್ತಾಭಾರತಿ ಜೊತೆಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಪ್ರತೀ ದಿನ ಬೆಳಿಗ್ಗೆ ನಮ್ಮ ವಿರುದ್ಧ ಆರೋಪಗಳು ಬರುವುದು ಸಾಮಾನ್ಯ. ಸರಕಾರದ ವಿರುದ್ಧ, ನರೇಂದ್ರ ಮೋದಿ ವಿರುದ್ಧ, ಎಂದು ಆರೋಪಗಳು ಬರುತ್ತವೆ. ನಾವು ಮೋದಿ, ಬಿಜೆಪಿ ವಿರೋಧಿಯಲ್ಲ. ನಾವು ನಮಗೆ ಶಕ್ತಿಕೊಟ್ಟಿರುವ ಸಂವಿಧಾನದ ಪರವಿರುವ ಸ್ವಾತಂತ್ಯ ಮಾಧ್ಯಮ. ಮಾಧ್ಯಮಗಳ ಧ್ವನಿ ಹತ್ತಿಕ್ಕುವ ನಡುವೆ ಸ್ವತಂತ್ರ ಮಾಧ್ಯಮಗಳು ಜನರ ದನಿಯಾಗುತ್ತಿದೆ. ಸ್ವತಂತ್ರ್ಯ ಮಾಧ್ಯಮಗಳ ನಡುವೆ ಯಾವುದೇ ಸ್ಪರ್ಧೆಯಿಲ್ಲ ಎಂದು ಸಿದ್ಧಾರ್ಥ್ ವರದರಾಜನ್ ಹೇಳಿದರು.
ಜನರಿಗೆ ಶಕ್ತಿ ನೀಡಲು ಅಂಬೇಡ್ಕರ್, ಭಗತ್ ಸಿಂಗ್ ಮಾಧ್ಯಮವನ್ನು ಪ್ರಾರಂಭ ಮಾಡಿದ್ದರು. ಜನರನ್ನು ಪ್ರಜಾಪ್ರಭುತ್ವದ ಕಡೆಗೆ ಒಗ್ಗೂಡಿಸಲು ಮಾಧ್ಯಮಗಳು ಮುಖ್ಯ ಎನ್ನುವುದು ಅವರಿಗೆ ಗೊತ್ತಿತ್ತು. ಅದಕ್ಕಾಗಿ ಅವರು ಪ್ರಾರಂಭ ಮಾಡಿದ್ದರು. ಜನಪರವಾಗಿ ಕೆಲಸ ಮಾಡುತ್ತಿದ್ದ ಪತ್ರಕರ್ತರ ಮೇಲೆ ಈಗ ದೇಶದ್ರೋಹದ ಪ್ರಕರಣ ದಾಖಲಿಸಲಾಗುತ್ತಿದೆ. ನನ್ನ ಮತ್ತು ಕರಣ್ ಥಾಪರ್ ವಿರುದ್ಧ ದೇಶದ್ರೋಹದ ಮೊಕದ್ದಮೆ ದಾಖಲಿಸಿದ್ದಾರೆ. ಇದನ್ನು ನೋಡಿ ನಗು ಬಂತು. ನಾವು ಸರಿದಾರಿಯಲ್ಲಿದ್ದೇವೆ ಎನಿಸಿತು ಎಂದು ಸಿದ್ಧಾರ್ಥ ವರದರಾಜನ್ ಹೇಳಿದರು.
ಸ್ವತಂತ್ರ ಪತ್ರಿಕೋದ್ಯಮ ನಡೆಸಬೇಕಾದರೆ, ನಾವು ಹೆದರಬಾರದು. ಪತ್ರಿಕೆ ನಡೆಸಬೇಕು ಎಂದರೆ ಭಯ ಬಿಡಬೇಕು. ಹೆದರಿಸಲು ಬಹಳಷ್ಟು ಜನರಿರುತ್ತಾರೆ. ಹೆದರಿಸಿ ಬಾಯಿ ಮುಚ್ಚಿಸಲು ನೋಡುತ್ತಾರೆ. ನಾವು ಹೆದರುವ ಅಗತ್ಯ ಇಲ್ಲ. ದೈರ್ಯದಿಂದ ಮುನ್ನಡೆದರೆ ನಮ್ಮ ಉದ್ದೇಶ ಈಡೇರುತ್ತದೆ. ನಾವು ಯಾವತ್ತೂ ನಿರಾಶರಾಗಬಾರದು. ಸ್ವತಂತ್ರ ಪತ್ರಿಕೋದ್ಯಮಕ್ಕೆ ಓದುಗರು ಇದ್ದಾರೆ. ಸ್ವತಂತ್ರ ಪತ್ರಿಕೋದ್ಯಮ ಇವತ್ತು ಅಥವಾ ನಾಳೆ ಜನರನ್ನು ತಲುಪಲು ಸಾಧ್ಯವಾಗದಿರಬಹುದು. ಆದರೆ ಮುಂದೊಂದು ದಿನ ಜನರನ್ನು ತಲುಪುತ್ತದೆ. ವಾರ್ತಾಭಾರತಿ ಪತ್ರಿಕೆಗೆ ವೆಬ್ ಸೈಟ್ ಕೂಡ ಮಾಡಿರುವುದರಿಂದ ಜನರನ್ನು ತಲುಪಲು ಸುಲಭವಾಗಿದೆ. ಸ್ವತಂತ್ರ ಪತ್ರಿಕೋದ್ಯಮಕ್ಕೆ ಜನರಿಗೆ ತಲುಪುವ ಶಕ್ತಿ ಇದೆ ಎಂದು ಅವರು ಹೇಳಿದರು.
ಕೆಲವು ಮಾಧ್ಯಮಗಳು ಜಾತಿ, ಧರ್ಮದ ಹೆಸರಿನಲ್ಲಿ ದ್ವೇಷ ಬಿತ್ತುವ ಕೆಲಸ ಮಾಡುತ್ತಿವೆ. ನಾವು ಸತ್ಯ ಹೇಳಬೇಕು, ದ್ವೇಷದ ಬದಲಿಗೆ ಸೌಹಾರ್ದವನ್ನು ಹೇಳಬೇಕು. ನಾಯಕತ್ವದ ಆರಾಧನೆ ಮಾಡಬಾರದು. ನಾಯಕತ್ವದ ಆರಾಧನೆ ಯಾವಾಗಲೂ ಹಾನಿಕಾರಕ. ವ್ಯಕ್ತಿ ಪೂಜೆ ಮಾಡಬಾರದು. ಮಾಧ್ಯಮಗಳು ಅದನ್ನು ಮಾಡುತ್ತಿವೆ. ಸ್ವತಂತ್ರ ಪತ್ರಿಕೋದ್ಯಮ ಅದರಿಂದ ದೂರ ಇರಬೇಕು. ಪ್ರಶ್ನೆ ಕೇಳುವ ಪರಿಪಾಠವಿರಬೇಕು. ಮಾವಿನಹಣ್ಣು ತಿನ್ನುತ್ತಿರಾ? ಹೇಗೆ ತಿನ್ನುತ್ತೀರಿ? ದಿನಕ್ಕೆ ಎಷ್ಟು ಗಂಟೆ ಕೆಲಸ ಮಾಡುತ್ತೀರಿ? ನಿಮಗೆ ಆಯಾಸವಾಗುವುದಿಲ್ಲವೇ? ಎಂಬ ಪ್ರಶ್ನೆಗಳನ್ನು ಕೇಳಬಾರದು. ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಶ್ನೆ ಕೇಳಬೇಕು. ಚುನಾವಣಾ ಆಯೋಗ ಸರಿಯಾಗಿ ಕೆಲಸ ಮಾಡದಿದ್ದರೆ, ಆಯೋಗವೇ ಒಂದು ಪಕ್ಷದ ಪರ ಕೆಲಸ ಮಾಡಿದರೆ ಪ್ರಶ್ನೆ ಕೇಳಬೇಕು. ಎಲ್ಲರೂ ಈ ರೀತಿಯ ಪ್ರಶ್ನೆಗಳನ್ನು ಕೇಳಿದರೆ ʼದ ವೈರ್ʼ ಮತ್ತು ʼವಾರ್ತಾಭಾರತಿʼ ಕೆಲಸ ಸುಲಭವಾಗುತ್ತದೆ ಎಂದು ಅವರು ಸ್ವತಂತ್ರ್ಯ ಮಾಧ್ಯಮಗಳಿಗೆ ಕರೆ ನೀಡಿದರು.
ಹಿಂದೂಸ್ತಾನದಲ್ಲಿ ಹಿಂದೂಸ್ತಾನಿಗಳ ವಿರುದ್ಧವೇ ಜಗಳವನ್ನು ಯಾರು ಮಾಡಿಸುತ್ತಿದ್ದಾರೆ ಎನ್ನುವುದರ ಕುರಿತೂ ಸ್ವತಂತ್ರ ಮಾಧ್ಯಮಗಳು ಚರ್ಚೆ ಮಾಡಬೇಕು. ದೇಶದಲ್ಲಿ ಮುಖ್ಯವಾಹಿನಿಗಳು ಪ್ರಶ್ನೆ ಕೇಳುವುದನ್ನೇ ಬಿಟ್ಟಿವೆ. ದೇಶದಲ್ಲಿ ನಿರುದ್ಯೋಗ, ಉಸಿರಾಡಲು ಕಷ್ಟವಾಗುತ್ತಿರುವ ಸಮಸ್ಯೆಗಳು ಹೆಚ್ಚಾಗುತ್ತಿವೆ. ದಿಲ್ಲಿಯಲ್ಲಿ ವಾಯುಮಾಲಿನ್ಯ ಮುಗಿಲು ಮುಟ್ಟಿದೆ. ನಮಗೆ ಉಸಿರಾಡಲೇ ಕಷ್ಟವಾಗುತ್ತಿದೆ. ಆದರೆ ಈ ವಿಷಯದ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾಗಲಿಲ್ಲ. 24 ಗಂಟೆಗಳು ಚರ್ಚಿಸಿದ್ದು ನೀವೇಕೆ ವಂದೇ ಮಾತರಂ ಹಾಡುತಿಲ್ಲ ಎನ್ನುವುದು. ವಿಪಕ್ಷ ನಾಯಕರಿಗೆ ನೀವೇಕೆ ವಂದೇ ಮಾತರಂ ಹಾಡುವುದಿಲ್ಲ ಎಂದು ಕೇಳಲಾಗುತ್ತಿದೆ. ಈ ಚರ್ಚೆ ಮಾಡಿದವರಾರೂ ಸ್ವಾತಂತ್ರ್ಯ ಚಳುವಳಿಯಲ್ಲಿ ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ಭಾಗವಹಿಸಿದವರಲ್ಲ. ಅವರಾರಿಗೂ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡಬೇಕಿಲ್ಲ. ಅದಕ್ಕೇ ಅವರು ಆ ವಿಚಾರವಾಗಿ ಮಾತನಾಡಿದರು. ಅಂಥವರ ಮುಂದೆ ನಾವು ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡಬೇಕು, ಪ್ರಶ್ನಿಸಬೇಕು ಎಂದು ಅವರು ಹೇಳಿದರು.
ಚುನಾವಣಾ ಆಯೋಗ ಅವರ ಮೇಲೆ ಕಣ್ಣಿಟ್ಟಿದೆ ಎಂದು ಗೊತ್ತಿದ್ದರೂ ಚುನಾವಣೆಯ ಸಂದರ್ಭ ಹಿಂದೂ ಮುಸ್ಲಿಂ ಬಗ್ಗೆ ಮಾತನಾಡುವ ರಾಜಕೀಯ ನಾಯಕರಿರುತ್ತಾರೆ. ಹಾಗಾದರೆ ಈ ದೇಶ ಕೇವಲ ಹಿಂದೂಗಳಿಗೆ ಮಾತ್ರ ಸೇರಿದೆಯೇ? ಅವರಿಗೆ ಮಾತ್ರ ಈ ದೇಶ ಸೀಮಿತವಾಗಿದೆಯೇ? ಈ ಪರಿಸ್ಥಿತಿಯಲ್ಲಿ ನಿಷ್ಪಕ್ಷಪಾತ ಚುನಾವಣೆ ಸಾಧ್ಯವೇ? ಈ ದೇಶದಲ್ಲಿ ಆಸ್ತಿಕರೂ, ನಾಸ್ತಿಕರೂ ಇದ್ದಾರೆ. ಈ ರೀತಿ ಮಾತನಾಡುವ ರಾಜಕೀಯ ನಾಯಕರನ್ನು ಮಾಧ್ಯಮಗಳು ಪ್ರಶ್ನಸಬೇಕು ಎಂದು ಅವರು ಆಗ್ರಹಿಸಿದರು.
ವಂದೇ ಮಾತರಂ ಬಗ್ಗೆ ಈ ರಾಜಕೀಯ ನಾಯಕರು ಮಾತನಾಡುತ್ತಾರೆ. ವಂದೇ ಮಾತರಂನಲ್ಲಿ ಸುಜಲಂ ಸುಫಲಂ ಎಂಬ ಎರಡು ಶಬ್ದಗಳು ಬರುತ್ತದೆ. ಭಾರತದಲ್ಲಿ ಸ್ವಚ್ಛ ನೀರಿದೆ. ಮರಗಳು, ಹಚ್ಚ ಹಸಿರು, ಹೊಲ ಗದ್ದೆಗಳಿಂದ ತುಂಬಿದೆ. ವಂದೇ ಮಾತರಂ ಹಾಡಲು ಹೇಳುವವರು ನೀರಿನಲ್ಲಿ ವಿಷಹಾಕುವ ದೊಡ್ಡ ಕಂಪೆನಿಗಳ ಜೊತೆ ಸೇರಿಕೊಂಡಿರುತ್ತಾರೆ. ಅವರೇ ಮರಗಳನ್ನು ಕಡಿಯುವ ಕೆಲಸ ಮಾಡುತ್ತಿರುತ್ತಾರೆ. ಆ ಮೂಲಕ ಪರಿಸರಕ್ಕೆ ಹಾನಿಯುಂಟು ಮಾಡುತ್ತಾರೆ. ದೇಶ ಈ ಪರಿಸರ ವ್ಯವಸ್ಥೆ ಉದ್ಯಮಿಗಳಿಗೆ ಮಾತ್ರ ಸೇರಿದೆಯೇ ಎಂದು ಪ್ರಶ್ನಿಸಬೇಕು. ಆ ಮೂಲಕ ದೇಶದ ಸಂಪತ್ತನ್ನು ಉಳಿಸಬೇಕು. ಇದು ನಮ್ಮ ಕರ್ತವ್ಯ ಎಂದು ಅವರ ಹೇಳಿದರು.
ದೇಶದ ಯಾವುದೇ ಮೂಲೆಯಲ್ಲಿ ಪತ್ರಕರ್ತರ ಮೆಲೆ ಹಲ್ಲೆಯಾದರೆ ಅದು ದೇಶದ ಎಲ್ಲ ಪತ್ರಕರ್ತರ ಮೇಲೆ ದಾಳಿ. ಎಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಪತ್ರಕರ್ತರ ಮೇಲಿನ ದಾಳಿ ನಿಲ್ಲುತ್ತದೆ. ಜನರ ದುಡ್ಡಿನಲ್ಲಿ ನಡೆಯುವಂತಾದರೆ ಆಗ ಸ್ವತಂತ್ರ ಪತ್ರಿಕೋದ್ಯಮ ಎನ್ನುವುದಕ್ಕೆ ಅರ್ಥ ಬರುತ್ತದೆ. ಸ್ವತಂತ್ರ ಮಾಧ್ಯಮಗಳಿಗೆ ಜನರ ಸಹಕಾರ ಅಗತ್ಯ. ಜನರ ಸಹಕಾರ ಇಲ್ಲದಿದ್ದಾಗ ಬಂಡವಾಳಶಾಹಿಗಳ, ಸರಕಾರದ ಬಳಿಗೆ ಸ್ವತಂತ್ರ ಮಾಧ್ಯಮಗಳು ತೆರಳಿದರೆ ಅವುಗಳ ಸ್ವಾತಂತ್ಯ ಕಡಿಮೆಯಾಗಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದರು.