ಮೋದಿ ಸರ್ಕಾರ ಕಾನೂನುಬಾಹಿರ; ಬ್ಯಾಲೆಟ್ ಪೇಪರ್ ಮೂಲಕ ಮರುಚುನಾವಣೆ ನಡೆಸಲಿ: ಮಲ್ಲಿಕಾರ್ಜುನ ಖರ್ಗೆ
ಎಸ್ಐಆರ್ ವಿರುದ್ಧ ಅ. 6ರಂದು ರಾಜ್ಯಾದ್ಯಂತ ಪ್ರತಿಭಟನೆ
ಕಲಬುರಗಿ: ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದಲ್ಲಿದ್ದು, ಈಗಿರುವ ಮೋದಿ ಸರ್ಕಾರವೇ ಕಾನೂನುಬಾಹಿರವಾಗಿದೆ. ಕೂಡಲೇ ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಮೂಲಕ ಮತ್ತೊಮ್ಮೆ ಚುನಾವಣೆ ನಡೆಸಬೇಕು ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದರು.
ನಗರದ ಐವಾನ್-ಎ-ಶಾಹಿ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ವಿವಿಧ ರಾಜ್ಯಗಳ ಬಿಜೆಪಿ ಮುಖ್ಯಮಂತ್ರಿಗಳು ಕಾನೂನುಬಾಹಿರವಾಗಿ ಅಧಿಕಾರದಲ್ಲಿದ್ದಾರೆ ಎಂದು ಆರೋಪಿಸಿದರು. “ದೇಶದಲ್ಲಿ ಈಗ ಕಾನೂನುಬಾಹಿರ ಆಡಳಿತ ನಡೆಯುತ್ತಿದೆ. ಸರ್ಕಾರಗಳನ್ನು ತೆಗೆದು ನ್ಯಾಯಯುತವಾಗಿ ಮತಪತ್ರದ ಮೂಲಕ ಮತ್ತೊಮ್ಮೆ ಚುನಾವಣೆ ನಡೆಸಬೇಕು” ಎಂದು ಒತ್ತಾಯಿಸಿದರು.
“ಪ್ರಜಾಪ್ರಭುತ್ವ ಉಳಿಯಬೇಕಾದರೆ ಪ್ರತಿಯೊಬ್ಬರ ಮತ ಸುರಕ್ಷಿತವಾಗಿರಬೇಕು. ಸಂವಿಧಾನ ನೀಡಿರುವ ಮತದಾನದ ಹಕ್ಕಿನಿಂದಲೇ ಬಡವರು ಮತ್ತು ಸಾಮಾನ್ಯ ಜನರಿಗೆ ಪ್ರಜಾಪ್ರಭುತ್ವದಲ್ಲಿ ಮಹತ್ವ ದೊರೆತಿದೆ. ಎಸ್ಐಆರ್ ಪ್ರಕ್ರಿಯೆ ಮೂಲಕ ದಲಿತ, ಅಲ್ಪಸಂಖ್ಯಾತರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಆ ಹಕ್ಕನ್ನು ರಕ್ಷಿಸುವುದು ನಮ್ಮ ಹೋರಾಟದ ಉದ್ದೇಶ” ಎಂದು ಅವರು ಹೇಳಿದರು.
“ಬಡವರ ಬಳಿ ಅಗತ್ಯ ದಾಖಲೆಗಳು ಇರುವುದಿಲ್ಲ. ಹಲವರು ಕೆಲಸಕ್ಕಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಲಸೆ ಹೋಗುತ್ತಾರೆ. ಇಂತಹವರು ಮತದಾರರ ಪಟ್ಟಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಹೇಗೆ ಪೂರ್ಣಗೊಳಿಸಬೇಕು?” ಎಂದು ಪ್ರಶ್ನಿಸಿದರು.
ಫಾರ್ಮ್-6, ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವುದು ಹಾಗೂ ಮತ್ತೆ ಸೇರ್ಪಡೆಗೊಳಿಸುವ ಪ್ರಕ್ರಿಯೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಮತದಾನದ ಹಕ್ಕನ್ನು ರಕ್ಷಿಸಲು ಮುಂಬರುವ ದಿನಗಳಲ್ಲಿ ಪ್ರತಿಪಕ್ಷಗಳು ದೇಶದಾದ್ಯಂತ ಒಗ್ಗಟ್ಟಾಗಿ ಹೋರಾಟ ನಡೆಸಲಿವೆ ಎಂದರು.
2023ರಲ್ಲಿ ಚುನಾವಣಾ ಆಯುಕ್ತರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತಂದಿರುವ ಕಾನೂನಿನಲ್ಲಿನ ಅಂಶಗಳ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ ಅವರು, ಚುನಾವಣಾ ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರದಲ್ಲಿ ಕಾನೂನು ರಕ್ಷಣೆಯನ್ನು ಒದಗಿಸಿರುವುದು ತಪ್ಪು. ಅವರು ಅಕ್ರಮ, ಕಾನೂನು ಬಾಹಿರ ಕ್ರಮಗಳನ್ನು ಕೈಗೊಂಡರೂ ಅವರ ವಿರುದ್ಧ ತನಿಖೆಗೆ ಹಸ್ತಕ್ಷೇಪ ಮಾಡಬಾರದು ಎನ್ನುವುದು ಖಂಡನಾರ್ಹ ಎಂದು ಅವರು ಅಭಿಪ್ರಾಯಪಟ್ಟರು.
ಚುನಾವಣಾ ಆಯೋಗದ ಸದಸ್ಯರ ನೇಮಕಾತಿ ಪ್ರಕ್ರಿಯೆಯಲ್ಲಿಯೂ ಕೇಂದ್ರ ಸರ್ಕಾರದ ಪ್ರಾಬಲ್ಯ ಹೆಚ್ಚಾಗಿದೆ ಎಂದು ಆರೋಪಿಸಿದ ಅವರು, ಪ್ರಧಾನಮಂತ್ರಿ, ಕೇಂದ್ರ ಗೃಹ ಸಚಿವ ಹಾಗೂ ವಿರೋಧ ಪಕ್ಷದ ನಾಯಕರು ಒಳಗೊಂಡ ಸಮಿತಿಯಲ್ಲಿ ಸರ್ಕಾರದ ಇಬ್ಬರು ಸದಸ್ಯರು ಬಹುಮತ ಹೊಂದಿರುವುದರಿಂದ ನಿರ್ಧಾರಗಳ ಮೇಲೆ ಸರ್ಕಾರದ ಪ್ರಭಾವ ಹೆಚ್ಚಾಗುತ್ತದೆ ಎಂದು ಹೇಳಿದರು.
ಡಾ.ಅಂಬೇಡ್ಕರ್, ಜವಾಹರಲಾಲ್ ನೆಹರೂ, ಗಾಂಧೀಜಿ, ವಲ್ಲಭ ಭಾಯಿ ಪಟೇಲ್, ಅವರೆಲ್ಲರೂ ಕೂಡಿ ಮಾಡಿರುವ ಆಯೋಗವಿದು. ಇಂಥ ಆಯೋಗವನ್ನು ತೆಗೆದು ಹಾಕುತ್ತೀರಾ? ಅವರಿಗಿಂತ ಮೋದಿ ಶಾ ಅವರೇ ಜಾಣರೇ? ಎಂದು ಪತ್ರಕರ್ತರು ಕೇಳಿರುವ ಪ್ರಶ್ನೆಗೆ ಉತ್ತರಿಸಿದರು.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಸರ್ವಾಧಿಕಾರಿ ಧೋರಣೆ ಕುರಿತು ಚುನಾವಣಾ ಆಯುಕ್ತರಿಬ್ಬರೂ 10 ತಿಂಗಳಲ್ಲಿ 14 ಬಾರಿ ದೂರು ನೀಡಿದ್ದಾರೆ. ಅವರ ದೂರಿಗೂ ಬೆಲೆ ಇಲ್ಲ. ಇಂತಹ ನಡೆ ದೇಶಕ್ಕೆ ಹಾನಿಕರಕ ಎಂದು ಹೇಳಿದರು.
“ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಬಳಸಿ”
“ಇವಿಎಂ ಎಂದರೆ ಮೋಸ” ಎಂದು ಆರೋಪಿಸಿದ ಖರ್ಗೆ, ಇವಿಎಂ ವ್ಯವಸ್ಥೆಯನ್ನು ತೆಗೆದುಹಾಕಿ ದೇಶಾದ್ಯಂತ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಬೇಕು. ನ್ಯಾಯಯುತವಾಗಿ ಮತ್ತೊಮ್ಮೆ ಮತಪತ್ರಗಳ ಮೂಲಕ ಚುನಾವಣೆ ನಡೆಯಬೇಕು. ಇವಿಎಂ ದೇಶದ ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತದೆ” ಎಂದು ಅವರು ಹೇಳಿದರು.
ಪ್ರತಿಭಟನೆ ನಡೆಸುವವರಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿದ ಅವರು, ಯಾವುದೇ ಒತ್ತಡಕ್ಕೂ ತಮ್ಮ ಹೋರಾಟ ನಿಲ್ಲುವುದಿಲ್ಲ. ಎಸ್‌ಐಆರ್ ವಿರುದ್ಧ ಅಕ್ಟೋಬರ್ 6ರಂದು ರಾಜ್ಯಾದ್ಯಂತ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮುಂದುವರಿಯಲಿದೆ ಎಂದು ಅವರು ಹೇಳಿದರು.