ʼಮೋದಿ@75 ಉದ್ಯೋಗ ಮಹೋತ್ಸವʼ ಕಾರ್ಯಕ್ರಮವು ಕೇವಲ ರಾಜಕೀಯ ಪ್ರದರ್ಶನ: ಮುಬೀನ್ ಅಹ್ಮದ್
ಮುಬೀನ್ ಅಹ್ಮದ್
ಕಲಬುರಗಿ: ಕಲಬುರಗಿಯಲ್ಲಿ ನಡೆಯುತ್ತಿರುವ “ಮೋದಿ@75 ಉದ್ಯೋಗ ಮಹೋತ್ಸವ” ಕಾರ್ಯಕ್ರಮವು ಕೇವಲ ರಾಜಕೀಯ ಪ್ರದರ್ಶನ ಮಾತ್ರವಿದೆ, ಇದು ಯುವಕರಿಗೆ ಮತ್ತೊಂದು ಖಾಲಿ ಭರವಸೆಯಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಮುಬೀನ್ ಅಹ್ಮದ್ ಅವರು ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತೀ ವರ್ಷ 2 ಕೋಟಿ ಉದ್ಯೋಗಗಳನ್ನು ಸೃಷ್ಟಿ ಮಾಡುವ ಭರವಸೆ ನೀಡಿದ್ದರು. ಇದೀಗ ಹತ್ತು ವರ್ಷಗಳ ಬಳಿಕವೂ ಆ ಭರವಸೆ ಪೂರ್ಣವಾಗಿಲ್ಲ. “ಇಂದು ಪದವೀಧರರೂ ಡೆಲಿವರಿ ಕೆಲಸಗಳಿಗೆ ಇಳಿದಿರುವ ಸ್ಥಿತಿಯಲ್ಲಿದ್ದಾರೆ. ಇತಿಹಾಸದಲ್ಲಿಯೇ ನಿರುದ್ಯೋಗ ಗರಿಷ್ಠ ಮಟ್ಟ ತಲುಪಿದೆ ಎಂದು ಕಳವಳ ವ್ಯಕ್ತಪಡಿಸಿದರು.
“ಯುವಕರಿಗೆ ಬೇಕಾಗಿರುವುದು ನಿಜವಾದ ಉದ್ಯೋಗ. ಈಗ ನಡೆಯುತ್ತಿರುವ ಉದ್ಯೋಗ ಮೇಳಗಳು ಕೇವಲ ಪ್ರದರ್ಶನವಷ್ಟೇ. ಸರ್ಕಾರವು ತನ್ನ ವಿಫಲತೆಗಳನ್ನು ಮರೆಮಾಚಲು ಈ ರೀತಿ ನಾಟಕಗಳನ್ನು ಆಯೋಜಿಸುತ್ತಿದೆ" ಎಂದು ಮೋದಿ ಸರ್ಕಾರದ ವಿರುದ್ಧ ಮುಬೀನ್ ಅಹ್ಮದ್ ಅವರು ಆರೋಪಿಸಿದ್ದಾರೆ.
ಯುವಕರು ಇನ್ನು ಮೋಸಹೋಗುವುದಿಲ್ಲ. ಅಸತ್ಯವಲ್ಲ, ನಿಜವಾದ ಉದ್ಯೋಗವೇ ಅವರ ಹಕ್ಕು ಆಗಿದೆ. ಕಲ್ಯಾಣ ಕರ್ನಾಟಕದ ಯುವಕರ ಹಿತಕ್ಕಾಗಿ ವೆಲ್ಫೇರ್ ಪಾರ್ಟಿ ಸರ್ಕಾರದ ವಿರುದ್ಧ ಹೋರಾಟ ಮುಂದುವರಿಸುವುದಾಗಿ ಮುಬೀನ್ ಅಹ್ಮದ್ ತಿಳಿಸಿದ್ದಾರೆ.