ಗುಲ್ಬರ್ಗ ವಿವಿಯಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ | ಸಮಾಜದಲ್ಲಿ ಸಮಾನತೆಗೆ ಶ್ರಮಿಸಿದ ಮಹಾನ್ ಚೇತನ ಡಾ.ಬಿಆರ್ ಅಂಬೇಡ್ಕರ್ : ಕೆ.ವಾಯ್ ರತ್ನಮ್
ಕಲಬುರಗಿ : ದಶಕದಲ್ಲಿ ನೆಲೆಯೂರಿರುವ ವೈವಿಧ್ಯಮಯ ಸಂಸ್ಕೃತಿಯನ್ನು ಗೌರವಿಸುವುದರ ಜೊತೆಗೆ ಜಾತಿ, ಧರ್ಮ, ವರ್ಣರಹಿತ ಜಾತ್ಯತೀತ ಮನೋಭಾವನೆಯೊಂದಿಗೆ ಸರ್ವರ ಪ್ರಗತಿಗೆ ದಾರದೀಪದಂತಹ ಸಂವಿಧಾನ ನೀಡಿ ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ ಮಹಾನ್ ಚೇತನ ಡಾ.ಬಿ.ಆರ್.ಅಂಬೇಡ್ಕರ್ ಅವರಾಗಿದ್ದಾರೆ ಎಂದು ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕರು ಹಾಗೂ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಕೆ.ವಾಯ್ ರತ್ನಮ್ ಹೇಳಿದರು.
ಬುಧವಾರ ಗುಲ್ಬರ್ಗ ವಿಶ್ವವಿದ್ಯಾಲಯ ಮತ್ತು ಬೆಂಗಳೂರಿನ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ತರಬೇತಿ, ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರದ ಸಹಯೋಗದಲ್ಲಿ ವಿವಿಯ ಕಾರ್ಯಸೌಧದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಆಯೋಜಿಸಿದ 76ನೇ ಸಂವಿಧಾನ ದಿನಾಚರಣೆ ನಿಮಿತ್ತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನದ ಪೀಠಿಕೆಯಲ್ಲಿನ ಪ್ರತಿಯೊಂದು ಪದಗಳು ಬಹಳಷ್ಟು ವಿಶಾಲವಾದ ಅರ್ಥವನ್ನು ನೀಡುತ್ತವೆ. ಸಮ ಸಮಾಜ ನಿರ್ಮಾಣಕ್ಕೆ ಸಂವಿಧಾನವೇ ನಮಗೆ ಪ್ರೇರಣೆಯಾಗಿದೆ. ವಿದ್ಯಾರ್ಥಿ ಸಮುದಾಯ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಅರಿತುಕೊಳ್ಳಬೇಕು ಮತ್ತು ಹೆಚ್ಚು ಪಸರಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ ಎಸ್. ಉಡಿಕೇರಿ ಮಾತನಾಡಿ, ಸಂವಿಧಾನ ಜಾರಿಯಾದ ಕಾರಣ ಇಂದು ಪ್ರತಿಯೊಬ್ಬರು ಶಿಕ್ಷಣವನ್ನು ಪಡೆಯಲು ಸಾಧ್ಯವಾಗಿದೆ. ಶಿಕ್ಷಣವೆಂಬುದು ಹುಲಿಯ ಹಾಲಿದ್ದಂತೆ ಅದನ್ನು ಕುಡಿದವರು ಘರ್ಜಿಸಲೆಬೇಕು ಎಂಬ ಮಾತಿನಂತೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಅಧ್ಯಯನವನ್ನು ಮಾಡುವುದರ ಮೂಲಕ ಹೆಚ್ಚಿನ ಜ್ಞಾನವನ್ನು ಸಂಪಾದನೆಯನ್ನು ಮಾಡಬೇಕು. ಇಂದಿನ ಸಮಾಜದಲ್ಲಿ ಕಾಣಬಹುದಾದ ಅಸಮಾನತೆ, ಜೀತ ಪದ್ದತಿ ನಿರ್ಮೂಲನೆ, ಮರ್ಯಾದೆ ಹತ್ಯೆಗಳು ಹೋಗಲಾಡಿಸಲು ಶ್ರಮಿಸಬೇಕು ಎಂದರು.
ರಾಷ್ಟ್ರೀಯ ವಿಚಾರ ಸಂಕಿರಣ ಅಂಗವಾಗಿ ಗುಲ್ಬರ್ಗ ವಿಶ್ವವಿದ್ಯಾಲಯದ ವಾಣಿಜ್ಯ ಮತ್ತು ನಿರ್ವಹಣಾ ನಿಕಾಯದ ಡೀನ್ ಪ್ರೊ.ರಾಜನಾಳ್ಕರ್ ಲಕ್ಷ್ಮಣ್ ಇವರ ಅಧ್ಯಕ್ಷತೆಯಲ್ಲಿ ಮುಖ್ಯಗೋಷ್ಠಿ ನಡೆಯಿತು.
ಗುಲ್ಬರ್ಗ ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಪ್ರೊ.ಚಂದ್ರಕಾಂತ್ ಯಾತನೂರ್ ಅವರು ಸರ್ವರನ್ನು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಸಂಶೋಧನಾ ವಿದ್ಯಾರ್ಥಿ ಮಹೇಶ್ವರಿ ಎಸ್. ಚೆನ್ನಪ್ಪಗೊಳ ಮತ್ತು ಅತಿಥಿ ಉಪನ್ಯಾಸಕ ಡಾ.ಶಿವಾನಂದ ಕಡಗಂಚಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ರಾಘವೇಂದ್ರ ಎಮ್.ಭೈರಪ್ಪ, ವಿದ್ಯಾ ವಿಷಯಕ ಪರಿಷತ್ ಸದಸ್ಯ ಪ್ರೊ. ಎಸ್.ಎನ್. ಗಾಯಕ್ವಾಡ್, ಕುಲಸಚಿವ ಪ್ರೊ. ರಮೇಶ ಲಂಡನಕರ್, ಮೌಲ್ಯಮಾಪನ ಕುಲಸಚಿವ ಡಾ. ನಿಂಗಣ್ಣ ಕಣ್ಣೂರ, ಹಣಕಾಸು ಅಧಿಕಾರಿ ಜಯಾಂಬಿಕಾ ಸೇರಿದಂತೆ ಇತರೆ ಬೋಧಕ-ಬೋಧಕೇತರ ವೃಂದದ ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.