×
Ad

ಕಲಬುರಗಿ: ಆಳಂದ ತಾಲ್ಲೂಕಿಗೆ ಐದು ಹೊಸ ಪಿಯು ಕಾಲೇಜು ಮಂಜೂರು

Update: 2025-05-17 12:34 IST

ಕಲಬುರಗಿ: ಆಳಂದ ತಾಲ್ಲೂಕಿನಲ್ಲಿ 2025-26ನೇ ಶೈಕ್ಷಣಿಕ ಸಾಲಿನಲ್ಲಿ ಐದು ಹೊಸ ಪಿಯು ಕಾಲೇಜುಗಳು ಮಂಜೂರು ಮಾಡಲಾಗಿದ್ದು, ಪ್ರಸಕ್ತ ವರ್ಷದಿಂದಲೇ ಅಗತ್ಯ ಸಿದ್ಧತೆಯೊಂದಿಗೆ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಯು ಜೂನ್‌ನಲ್ಲಿ ಆರಂಭವಾಗಲಿದೆ ಎಂದು ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ತಿಳಿಸಿದೆ.

ಆಳಂದ ಶಾಸಕ ಬಿ.ಆರ್. ಪಾಟೀಲ ಅವರ ಬೇಡಿಕೆಯ ಮೇರೆಗೆ ತಾಲ್ಲೂಕಿನ ಧುತ್ತರಗಾಂವ(kk0476), ನಿಂಬಾಳ(Kk0477), ಜಿಡಗಾ(kk0478), ತಡಕಲ(kk0479) ಹಾಗೂ ಮಾಡಿಯಾಳ(kk0480) ಗ್ರಾಮಗಳಲ್ಲಿ ಹೊಸದಾಗಿ ಪದವಿ ಪೂರ್ವ ಕಾಲೇಜುಗಳು ಪ್ರಾರಂಭವಾಗಲಿವೆ. ಪ್ರಸಕ್ತ ವರ್ಷ ಕಲಾ ವಿಭಾಗದ ಪ್ರಥಮ ವರ್ಷದ ಪ್ರವೇಶಕ್ಕೆ ಅವಕಾಶ ಕೊಡಲಾಗಿದೆ . ನಿಂಬಾಳ, ಧುತ್ತರಗಾಂವ ಹಾಗೂ ಜಿಡಗಾ -ಗ್ರಾಮದ ಸರ್ಕಾರಿ ಪ್ರೌಢ ಶಾಲೆಗಳನ್ನು ಉನ್ನತೀಕರಿಸಿ, ಇಲ್ಲಿ ಪಿಯು ಕಾಲೇಜು ಮಂಜೂರು ಮಾಡಲಾಗಿದೆ. ತಡಕಲ ಮತ್ತು ಮಾಡಿಯಾಳ ಗ್ರಾಮದಲ್ಲಿ ಹೊಸ ಪಿಯು ಕಾಲೇಜು ಶುರುವಾಗಲಿದೆ ಎಂದು ಇಲಾಖೆ ತನ್ನ ಆದೇಶದಲ್ಲಿ ತಿಳಿಸಿದೆ.

ಕೆಕೆಆರ್ ಡಿಬಿ ಯು ಅನುದಾನ ನೀಡುವುದಾಗಿ ಸಮ್ಮತಿಸಿರುವುದನ್ನು ಪರಿಗಣಿಸಿ, ಪದವಿ ಪೂರ್ವ ಕಾಲೇಜುಗಳ ಮಂಜೂರಾತಿಗೆ ಸರಕಾರ ಆದೇಶ ನೀಡಿದೆ. ಇದಲ್ಲದೆ, ಅಗತ್ಯ ಮೂಲಸೌಲಭ್ಯಗಳು ಒದಗಿಸಲು ಅಗತ್ಯ ವ್ಯವಸ್ಥೆ ಕೈಗೊಳ್ಳಲು ಕಾಲೇಜು ಶಿಕ್ಷಣ ಇಲಾಖೆಗೆ ಸೂಚಿಸಲಾಗಿದೆ. ಹೊಸ ಪಿಯು ಕಾಲೇಜು ಆರಂಭದಿಂದ ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಸದ್ಯ ಪ್ರಾಥಮಿಕ ಶಾಲಾ ಕಟ್ಟಡ, ಸರ್ಕಾರಿ ಪ್ರೌಢಶಾಲೆಯಲ್ಲಿ ತರಗತಿ ಪ್ರಾರಂಭಿಸಲಾಗುವುದು. ಮುಂದೆ ಸರ್ಕಾರಿ ಜಾಗದಲ್ಲಿ ನೂತನ ಕಾಲೇಜು ಕಟ್ಟಡ ನಿರ್ಮಾಣಗೊಳ್ಳಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ನಿಂಬಾಳ, ಧುತ್ತರಗಾಂವ, ಮಾಡಿಯಾಳ ಗ್ರಾಮದಲ್ಲಿ ಪಿಯು ಕಾಲೇಜಿಗಾಗಿ ಬಹುದಿನ ಬೇಡಿಕೆ ಈಗ ಈಡೇರಿದೆ. ವಿಶೇಷವಾಗಿ ಈ ಭಾಗದ ಹೆಣ್ಣು ಮಕ್ಕಳು ಪಿಯು ಶಿಕ್ಷಣ ಪೂರ್ಣಗೊಳಿಸಲು ಅನುಕೂಲವಾಗಲಿದೆ ಎಂದು ಸಿಪಿಐ ಮುಖಂಡ ಭೀಮಾಶಂಕರ ಮಾಡಿಯಾಳ ತಿಳಿಸಿದ್ದಾರೆ.




 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News