ಬಿಜೆಪಿಗರ ಪ್ರತಿಭಟನೆ ಹಾಸ್ಯಾಸ್ಪದ, ಅವರಿಗೆ ನೈತಿಕ ಹಕ್ಕಿಲ್ಲ: ಡಾ.ಶರಣಪ್ರಕಾಶ್ ಪಾಟೀಲ್
ಕಲಬುರಗಿ: ಬಿಜೆಪಿಗರು ಅಧಿಕಾರ ಕಳೆದುಕೊಂಡು ಬುದ್ಧಿಭ್ರಷ್ಟರಾಗಿದ್ದಾರೆ, ಅವರಿಗೆ ಯಾವ ವಿಷಯದಲ್ಲಿ ಪ್ರತಿಭಟನೆ ಮಾಡಬೇಕೆನ್ನುವುದು ಗೊತ್ತಾಗುತ್ತಿಲ್ಲ, ಅವರ ಕಲಬುರಗಿ ಚಲೋ ಪ್ರತಿಭಟನೆ ಒಂದು ಹಾಸ್ಯಾಸ್ಪದವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಇಲ್ಲಿನ ಜಿಲ್ಲಾ ಉಸ್ತುವಾರಿ ಪ್ರಿಯಾಂಕ್ ಖರ್ಗೆ ಅವರನ್ನೇ ನಿಂದಿಸಿ ಮತ್ತೆ ಅವರ ಕ್ಷೇತ್ರಕ್ಕೆ ಹೋಗಿದ್ದಾರೆ, ಅಲ್ಲಿನ ಕಾರ್ಯಕರ್ತರು ಪ್ರಿಯಾಂಕ್ ಖರ್ಗೆಯವರನ್ನು ನಾರಾಯಣ ಸ್ವಾಮಿ ಯಾಕೆ ಬೈದಿದ್ದಾರೆ ಎನ್ನುವುದನ್ನು ಸ್ವಾಭಾವಿಕವಾಗಿ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ನಾರಾಯಣಸ್ವಾಮಿ ತಾನೇ ವಿಕ್ಟಿಮ್ ತರಹ ಆಡುತ್ತಿದ್ದಾರೆ, ಇಲ್ಲಿ ವಿಕ್ಟಿಮ್ ಇರೋದು ಪ್ರಿಯಾಂಕ್ ಖರ್ಗೆ ಎಂದು ಹೇಳಿದರು.
ಬಿಜೆಪಿಗರು ಕಲಬುರಗಿಯಲ್ಲಿ ಈವರೆಗೆ ಇದು ನಾಲ್ಕನೆಯ ಪ್ರತಿಭಟನೆ ಆಗಿದೆ. ಅವರು ಯಾರೂ ಸಹ ಇಲ್ಲಿಯವರೆಗೆ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಮುಂದೆ ಬಂದಿಲ್ಲ, ಜನರಿಗೋಸ್ಕರ ಮತ್ತು ಇಲ್ಲಿನ ಅಭಿವೃದ್ಧಿಯ ಸಲುವಾಗಿ ಯಾವುದೇ ಪ್ರತಿಭಟನೆ ಮಾಡಿಲ್ಲ, ಬದಲಾಗಿ ಅವರು ಪ್ರತಿ ಸಲ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನೇ ಟಾರ್ಗೆಟ್ ಮಾಡಿಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. ಬಿಜೆಪಿಗರಿಗೆ ಖರ್ಗೆ ಕಂಡ್ರೆ ಭಯವಾಗುತ್ತಿದೆ ಎಂದು ಗೊತ್ತಾಗುತ್ತಿದೆ ಎಂದ ಅವರು, ನಾವು ಕೂಡ ವಿಪಕ್ಷ ಸ್ಥಾನದಲ್ಲಿದ್ದೆವು. ಆದರೆ ಇವರ ತರಹ ಒಬ್ಬ ವ್ಯಕ್ತಿಯನ್ನೇ ಟಾರ್ಗೆಟ್ ಮಾಡಿ ಬೈಯುವುದು, ಪ್ರತಿಭಟನೆ ಮಾಡುವುದು ಮಾಡಿಲ್ಲ. ಬಿಜೆಪಿಗರಿಗೆ ಕಲಬುರಗಿಯಲ್ಲಿ ಪ್ರತಿಭಟನೆ ಮಾಡುವುದಕ್ಕೂ ನೈತಿಕ ಹಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ನಾರಾಯಣಸ್ವಾಮಿ ಕಲಬುರಗಿಗೆ ಬಂದು ಸಚಿವರ ಕಾರ್ಯ ವೈಖರಿ ಬಗ್ಗೆ ಟೀಕೆ ಟಿಪ್ಪಣಿ ಮಾಡಲಿ ಪರವಾಗಿಲ್ಲ, ಆದರೆ ಇವರು ಅದನ್ನ ಬಿಟ್ಟು ಸುದ್ದಿಗೋಷ್ಠಿಯಲ್ಲಿ ಉಸ್ತುವಾರಿ ಸಚಿವರನ್ನು ಕೀಳುಮಟ್ಟದಲ್ಲಿ ಬೈಯುವುದು ಸರಿಯಲ್ಲ, ಇಂತಹ ಹೇಳಿಕೆ ನೀಡಿ ಬಿಜೆಪಿಗೆ ಮುಜುಗರ ತಂದಿರುವ ಬಗ್ಗೆ ಅವರ ಪಕ್ಷದ ನಾಯಕರೇ ಸುಮ್ಮನೆ ಕುಳಿತಿದ್ದಾರೆ. ಈವರೆಗೆ ನಾರಾಯಣಸ್ವಾಮಿ ಅವರು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನ ಸ್ಥಾನದ ತಕ್ಕಂತೆ ಅವರು ನಡೆದುಕೊಂಡಿಲ್ಲ, ಹಾಗಾಗಿ ಕೂಡಲೇ ಅವರನ್ನು ವಿರೋಧ ಪಕ್ಷ ನಾಯಕನ ಸ್ಥಾನದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಕಲಬುರಗಿ ರಿಪಬ್ಲಿಕ್ ಮಾಡುತ್ತಿದ್ದಾರೆ ಎಂಬ ಬಿ.ಶ್ರೀರಾಮುಲು ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ರಿಪಬ್ಲಿಕ್ ಆಫ್ ಬಳ್ಳಾರಿ ಮಾಡಿರುವ ಅವರು ನಮಗೆ ಬಂದು ಪಾಠ ಮಾಡುತ್ತಿದ್ದಾರೆ, ಬಳ್ಳಾರಿ ಕೊಳ್ಳೆ ಹೊಡೆದು ಜೈಲುಪಲಾಗಿರುವ ಜನಾರ್ದನ ರೆಡ್ಡಿ ಜೊತೆಗಿದ್ದ ರಾಮುಲು ನಮಗೆ ಬುದ್ಧಿ ಹೇಳಲು ಯಾವುದೇ ನೈತಿಕತೆ ಇಲ್ಲ ಎಂದು ತಿರುಗೇಟು ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಎಂಎಲ್ಸಿ ಜಯದೇವ ಗುತ್ತೇದಾರ್, ಶಾಸಕಿ ಖನೀಜ್ ಫಾತಿಮಾ, ಅಲ್ಲಮಪ್ರಭು ಪಾಟೀಲ್, ಸುಭಾಷ್ ರಾಥೋಡ್, ರಾಜಗೋಪಾಲ ರೆಡ್ಡಿ, ಡಾ.ಕಿರಣ್ ದೇಶಮುಖ್, ಮಹಾಂತಪ್ಪ ಸಂಗಾವಿ ಸೇರಿದಂತೆ ಮತ್ತಿತರರು ಇದ್ದರು.