ಕಲಬುರಗಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ನೆಕ್ಸ್ಟ್ ಫೌಂಡೇಶನ್ ಸ್ಥಾಪನೆ: ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ: ಕಲಬುರಗಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಜನರಿಂದ-ಜನರಿಗಾಗಿ- ಜನರಿಗೋಸ್ಕರವಾಗಿ ದೇಶದಲ್ಲಿಯೇ ಮೊದಲ ಬಾರಿಗೆ ಸರಕಾರದ ವತಿಯಿಂದಲೆ ಕಲಬುರಗಿ ನೆಕ್ಸ್ಟ್ ಫೌಂಡೇಶನ್ ಸ್ಥಾಪಿಸಲಾಗಿದ್ದು, ಜನಸಾಮಾನ್ಯರು ಸೇರಿದಂತೆ ಸಂಘ-ಸಂಸ್ಥೆಗಳು ಮತ್ತು ಖಾಸಗಿ ಕಂಪನಿಗಳು ಜಿಲ್ಲೆಯ ಅಭಿವೃದ್ಧಿಗಾಗಿ ತಮ್ಮದೇ ಆದ ದೇಣಿಗೆ ನೀಡಲು ಮತ್ತು ದೇಣಿಗೆ ಹಣ ಜನರ ಬೇಡಿಕೆ ಅನುಗುಣವಾಗಿ ಖರ್ಚು ಮಾಡಲು ಟ್ರಸ್ಟ್ ಮೂಲಕ ಒಂದು ವೇದಿಕೆ ಕಲ್ಪಿಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಸೋಮವಾರ ಕಲಬುರಗಿ ನಗರದ ಝೆಸ್ಟ್ ಕ್ಲಬ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಕಲಬುರಗಿ ನೆಕ್ಸ್ಟ್ ಫೌಂಡೇಶನ್ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಇದೊಂದು ದೇಶದಲ್ಲಿ ವಿನೂತನ ಪ್ರಯತ್ನವಾಗಿದ್ದು, ಸಮುದಾಯದ ತೊಡಗಿಸಿಕೊಳ್ಳುವಿಕೆ, ಪಾಲುದಾರರ ಸಹಯೋಗ, ಕಾರ್ಪೊರೇಟ್ ಪಾಲುದಾರಿಕೆಗಳ ಖಾಸಗಿಯವರ ಸಹಭಾಗಿತ್ವದಲ್ಲಿ ಸರ್ಕಾರವೇ ಟ್ರಸ್ಟ್ ರಚಿಸಿದೆ. ಜಿಲ್ಲೆಯಲ್ಲಿ ಲಭ್ಯವಿರುವ ಮಾನವ ಸಂಪನ್ಮೂಲ ಬಳಸಿಕೊಂಡು ಗುಣಾತ್ಮಕ ಬದಲಾವಣೆ ತರಲು ಪಣ ತೊಡಲಾಗಿದೆ ಎಂದರು.
ಸರಕಾರ ಸಾರ್ವಜನಿಕರ ಕಲ್ಯಾಣ, ಮೂಲಸೌಕರ್ಯ ಮತ್ತು ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರೂ. ಹಣ ಖರ್ಚು ಮಾಡಿದರೂ ಕೂಡ ಕೆಲವು ಸವಾಲುಗಳು ಮತ್ತು ಅವಕಾಶಗಳಿಗೆ ತುರ್ತು, ಕೇಂದ್ರೀಕೃತ ಮತ್ತು ನವೀನ ಮಧ್ಯಸ್ಥಿಕೆ ಅತ್ಯವಶ್ಯಕವಾಗಿರುತ್ತದೆ. ಇವು ಸಾರ್ವಜನಿಕ ಕಾರ್ಯಕ್ರಮಗಳ ಸಾಂಪ್ರದಾಯಿಕ ವ್ಯಾಪ್ತಿಗೆ ಬರುವುದಿಲ್ಲ. ಈ ನಿರ್ಣಾಯಕ ಅಂತವನ್ನು ಪರಿಹರಿಸಲು ಪ್ರತಿಷ್ಠಾನವು ಹೆಜ್ಜೆ ಹಾಕುವ ಮೂಲಕ ಜನರ ಬೇಡಿಯಂತೆ ಅಂತರ ತುಂಬುವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡಲಿದೆ ಎಂದರು.
ವಿಶೇಷವಾಗಿ ಶಿಕ್ಷಣ ಮತ್ತು ಆರೋಗ್ಯ, ಕ್ರೀಡಾ ಮತ್ತು ಯುವ ಸಬಲೀಕರಣ, ಕೌಶಲ್ಯಾಭಿವೃದ್ಧಿ ಮತ್ತು ಸ್ವಯಂ ಉದ್ಯೋಗ, ಪರಿಸರ ಮತ್ತು ವನ್ಯಜೀವಿ ರಕ್ಷಣೆ, ಬಡತನ ಮತ್ತು ನಿರುದ್ಯೋಗ ನಿವಾರಣೆ, ಅನಾರೋಗ್ಯ ಮತ್ತು ಅಪೌಷ್ಠಿಕತೆ ಹೋಗಲಾಡಿಸುವಿಕೆ, ಮಹಿಳಾ ಸಬಲೀಕರಣ, ಬಾಲ್ಯ ವಿವಾಹ ತಡೆಯುವಿಕೆ, ಗ್ರಾಮೀಣ ಅಭಿವೃದ್ಧಿ, ಹವಾಮಾನ ಬದಲಾವಣೆ ಮತ್ತು ಪರಿಸರ ಮಾಲಿನ್ಯ ತಡೆಗಟ್ಟುವಿಕೆ ಹೀಗೆ ಮುಂತಾದ ಕ್ಷೇತ್ರದಲ್ಲಿ ಟ್ರಸ್ಟ್ ಕಾರ್ಯನಿರ್ವಹಿಸಲಿದೆ ಎಂದರು.
ಟ್ರಸ್ಟ್ ನಲ್ಲಿ ನಾಲ್ಕು ಜನ ಚುನಾಯಿತ ಜನಪ್ರತಿನಿಧಿಗಳು ಮತ್ತು 8 ಜನ ಅಧಿಕಾರಿಗಳು ಸೇರಿ ಒಟ್ಟು 12 ಜನರಿದ್ದು, ಎಲ್ಲರು ಪದನಿಮಿತ್ಯ ಸದಸ್ಯರಾಗಿದಾರೆ. ದೇಣಿಗೆ ಪ್ರತಿ ರೂಪಾಯಿಗೂ ಇಲ್ಲಿ ಉತ್ತರದಾಯಿತ್ವ, ಹೊಣೆಗಾರಿಕೆ ಇದೆ. ದೇಣಿಗೆ ಹಣ ಸಮರ್ಪಕ ಬಳಕೆ ಹಾಗೂ ಪಾರದರ್ಶಕತೆ ಕಾಯ್ದುಕೊಳ್ಳಲು ಜಿಲ್ಲಾಧಿಕಾರಿಗಳನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಜನೋಪಯೋಗಿ ಕೆಲಸ ಕಾರ್ಯಗಳಿಂದ ಮುಂದಿನ ದಿನದಲ್ಲಿ ಈ ಟ್ರಸ್ಟ್ ಭಾರತದ ಭರವಸೆಯ ಟ್ರಸ್ಟ್ ಆಗಿ ರೂಪ ತಾಳಲಿದೆ ಎಂದು ಭರವಸೆಯ ಮಾತುಗಳನ್ನಾಡಿದರು.
ರಾಜ್ಯದ ಜಿಡಿಪಿ ನೋಡಿದಾಗ ಬೆಂಗಳೂರು ನಗರದ ಕೊಡುಗೆ ಶೇ.39.90 ಇದ್ದರೆ ನಂತರದ ಸ್ಥಾನ ದಕ್ಷಿಣ ಕನ್ನಡ ಜಿಲ್ಲೆ ಶೇ.5.40 ಹೊಂದಿದೆ. ಬೆಂಗಳೂರು ಗ್ರಾಮೀಣ ಮತ್ತು ಕಲಬುರಗಿ ಜಿಲ್ಲೆಯ ಕೊಡುಗೆ ಶೇ.1.90 ರಷ್ಟಿದೆ. ಕಲಬುರಗಿ ಜಿಲ್ಲೆಯಲ್ಲಿ 40 ವಯಸ್ಸಿನ ಕಡಿಮೆ ಇರುವ ಜನಸಂಖ್ಯೆ ಹೆಚ್ಚಿದ್ದು, ಇಂತಹ ಶಕ್ತಿಶಾಲಿ ಮಾನವ ಸಂಪನ್ಮೂಲ ಸದ್ಬಳಕೆ ಮಾಡಿಕೊಂಡು ಟ್ರಸ್ಟನ ಸಹಕಾರದಿಂದ ರಾಜ್ಯದ ಜಿ.ಡಿ.ಪಿ.ಗೆ ಜಿಲ್ಲೆಯ ಕೊಡುಗೆ ಪ್ರಮಾಣ ಹೆಚ್ಚಿಸುವ ಗುರಿ ಹೊಂದಲಾಗಿದೆೆ ಎಂದರು.
ಟ್ರಸ್ಟ್ ಉದ್ದೇಶ ಮತ್ತು ಕಾರ್ಯಚಟುವಟಿಕೆ ನೋಡಿಕೊಂಡು ಈಗಾಗಲೆ ಹತ್ತಾರು ಮಲ್ಟಿ ನ್ಯಾಷನಲ್ ಕಂಪೆನಿಗಳು ಜಿಲ್ಲೆಯ ಪ್ರಗತಿಗೆ ನಮ್ಮೊಂದಿಗೆ ಕೈಜೋಡಿಸಿ ಒಪ್ಪಂದ ಮಾಡಿಕೊಂಡಿವೆ. ಜೇಯಿಸ್ ಕಂಪೆನಿ ಜಿಲ್ಲೆಯ 11 ಲಕ್ಷ ವಿದ್ಯಾರ್ಥಿಗಳಿಗೆ ಕಣ್ಣಿನ ತಪಾಸಣೆ ನಡೆಸಿ ಅಗತ್ಯವಿದ್ದರೆ ಕನ್ನಡಕ ಸಹ ಉಚಿತವಾಗಿ ನೀಡಲಿದೆ. ಅನ್‌ಸ್ಟಾಪ್ ಸಂಸ್ಥೆ 2,500 ಜನ ಯುವಕರಿಗೆ ಉದ್ಯೋಗಾಧರಿತ ಕೌಶಲ್ಯ ಮತ್ತು ಹೆಡ್-ಹೆಲ್ಡ್-ಹೈ ಸಂಸ್ಥೆ 15 ಸಾವಿರ ಯುವಕರಿಗೆ ಡಿಜಿಟಲ್ ಔದ್ಯೋಗಿಕ ತರಬೇತಿ ನೀಡಲಿದೆ. ಕೃಷಿ ಉತ್ಪನ್ನಗಳ ಸಂಸ್ಕರಣೆ, ಬ್ರ್ಯಾಂಡಿಂಗ್, ಮಾರುಕಟ್ಟೆ ಕುರಿತು ರೈತರಿಗೆ ತಿಳಿಹೇಳಲು ಕೃಷಿ ಕಾಯಕಲ್ಪ ಸಂಸ್ಥೆ ಅನ್ನದಾತರ ನೆರವಿಗೆ ಬಂದಿದೆ. 500 ಜನರಿಗೆ ಡ್ರೋನ್ ಪೈಲಟ್ ಟ್ರೇನಿಂಗ್ ನೀಡಲು ನೀಯೋ ಸ್ಕೈ ಮುಂದೆ ಬಂದಿದೆ. 250 ಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆಗೆ ಸಿತಾರಾ ಅಕ್ಕ ಸಂಸ್ಥೆ ಸಹಾಯ ಹಸ್ತ ಚಾಚಿದೆ. ಜಲಮೂಲಗಳ ಸಂರಕ್ಷಣೆಗೆ ಟಾಟಾ ಎಲೆಕ್ಟಾನಿಕ್ಸ್ ಸಂಸ್ಥೆ ತನ್ನ ಪರಿಸರ ಕಾಳಜಿ ತೋರಿದೆ. ಆಡಳಿತ ವರ್ಗಕ್ಕೆ ನೆರವಾಗಲು ಫೈಡ್‌ಲಿಟಿ ಸಂಸ್ಥೆ ಸರ್ಕಾರಿ ಕಚೇರಿಗಳಿಗೆ 800 ಗಣಕಯಂತ್ರ ನೀಡಲಿದೆ. ಕಿಯೋನಿಕ್ಸ್ ಸಂಸ್ಥೆ ಶಿಕ್ಷಣ ಸಂಸ್ಥೆಗಳಿಗೆ 1,095 ಕೆ.ಇ.ಓ. ಅತ್ಯಾಧುನಿಕ ಎ.ಐ. ಚಾಲಿತ ಕಾಂಪ್ಯಾಕ್ಟ್ ಪಿ.ಸಿ. ನೀಡಲಿದೆ. ಗ್ರಾಮೀಣ ಭಾಗದ ಮಹಿಳೆಯರ ಸಬಲೀಕರಣ ಮತ್ತು ಅವರ ಜೀವನಮಟ್ಟ ಸುಧಾರಣೆಗೆ ಗ್ರಾಮ ವಿಕಾಸ್ ಸಂಸ್ಥೆಯೊಂದಿಗೆ ಟ್ರಸ್ಟ್ ಕೆಲಸ ಮಾಡಲಿದೆ ಎಂದು ಟ್ರಸ್ಟ್ ಮುಂದಿನ ಕಾರ್ಯಯೋಜನೆಗಳ ಕುರಿತು ಸಚಿವರು ಮಾಹಿತಿ ನೀಡಿದರು.
ಮುಂದಿನ ಒಂದು ವರ್ಷದಲ್ಲಿ ಡ್ರೀಂ ಸ್ಪೋರ್ಟ್ ಸಂಸ್ಥೆಯ ಸಹಭಾಗಿತ್ವದಲ್ಲಿ ಜಿಲ್ಲೆಯಲ್ಲಿ ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾ ಸಂಕೀರ್ಣ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. ಈ ಮೂಲಕ ಯುವ ಸಮೂಹ ಪಾಠದ ಜೊತೆಗೆ ಕ್ರೀಡೆಯಲ್ಲಿ ಸಕ್ರೀಯವಾಗಿರಲು ಪೂರಕವಾದ ವಾತಾವರಣ ಕಲ್ಪಿಸಲಾಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಇದೇ ಸಂದರ್ಭದಲ್ಲಿ ಘೋಷಿಸಿದರು.
ಕಲಬುರಗಿ ನೆಕ್ಸ್ಟ್ ಫೌಂಡೇಶನ್ ಉಪಾಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಪ್ರಸ್ತಾವಿಕವಾಗಿ ಮಾತನಾಡಿ, ರಾಜ್ಯ ಸರ್ಕಾರದಿಂದ ಅನುಮೋದನೆ ಪಡೆದು ಕಲಬುರಗಿ ನೆಕ್ಸ್ಟ್ ಫೌಂಡೇಶನ್, ಕಲಬುರಗಿ ಎಂಬ ಹೆಸರಿನ ಸಾರ್ವಜನಿಕ ದತ್ತಿ ಟ್ರಸ್ಟ್ (ಪಬ್ಲಿಕ್ ಚಾರಿಟೆಬಲ್ ಟ್ರಸ್ಟ್) ನೋಂದಾಯಿಸಲಾಗಿದೆ ಎಂದರಲ್ಲದೆ ಟ್ರಸ್ಟ್ ಧ್ಯೇಯ ಮತ್ತು ಉದ್ದೇಶ ವಿವರಿಸಿದರು.
ಇದೇ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ವೈಯಕ್ತಿಕ ಹಣದಿಂದ ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಪರೀಕ್ಷೆಗೆ ಸಹಾಯವಾಗಲೆಂದು ಪಠ್ಯಪುಸ್ತಕ ಅನುಗುಣವಾಗಿ ಮಾದರಿ ಪ್ರಶ್ನೆ ಪತ್ರಿಕೆ ಕೈಪಿಡಿವುಳ್ಳ 35,000 ಪುಸ್ತಕಗಳನ್ನು ವಿತರಿಸಲಾಗುತ್ತಿದ್ದು, ಇಲ್ಲಿ ಸಾಂಕೇತಿಕವಾಗಿ ಐವರು ಮಕ್ಕಳಿಗೆ ನೀಡಲಾಯಿತು. ಇದಲ್ಲದೆ ಫೈಡ್‌ಲಿಟಿ ಐ.ಟಿ. ಸಂಸ್ಥೆಯಿಂದ ನೀಡಲಾದ ಗಣಕಯಂತ್ರಗಳನ್ನು ಸರಕಾರಿ ಕಚೇರಿ ಕೆಲಸ ಕಾರ್ಯಗಳಿಗೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ ನೀಡಲಾಯಿತು.
ಕಲಬುರಗಿ ನೆಕ್ಷ್ಟ್ ಫೌಂಡೇಷನ್ ಏನಿದು?:
ಖಾಸಗಿ ಮತ್ತು ಸಾರ್ವಜನಿಕ ಉದ್ದಿಮೆಗಳು/ ಕಾರ್ಖಾನೆಗಳಿಂದ ಅವರ ಸಿ.ಎಸ್.ಆರ್(ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ) ಅನುದಾನವನ್ನು ಸಂಗ್ರಹಿಸಿ, ಅದನ್ನು ನಿಯಮಾನುಸಾರವಾಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಬಳಸುವುದು. ಸರಕಾರದ ಯೋಜನೆಗಳಿಂದ ಬರುವ ಅನುದಾನ ಹೊರತಾಗಿ ಜನರ ಬೇಡಿಕೆ ಅನುಗುಣವಾಗಿ ಟ್ರಸ್ಟ್ ಅನುದಾನವನ್ನು ಹೆಚ್ಚುವರಿಯಾಗಿ ಬಳಸಿ ಅಂತರ ತುಂಬುವಿಕೆ ಕೆಲಸ ಪರಿಣಾಮಕಾರಿಯಾಗಿ ಮಾಡುವುದು. ಜಿಲ್ಲೆಯ ಪ್ರಗತಿಗೆ ಕಂಪನಿಗಳ ಸಿ.ಎಸ್.ಆರ್ ಅನುದಾನ ಮತ್ತು ದೇಣಿಗೆ ಹಣವನ್ನು ಸರಿಯಾಗಿ ಮತ್ತು ಸೂಕ್ತವಾಗಿ ಬಳಕೆಯಾಗಲು ಒಂದು ವೇದಿಕೆಯನ್ನು ಕಲ್ಪಿಸಲಾಗಿದೆ. ಟ್ರಸ್ಟ್‌ಗೆ ದೇಣಿಗೆ ನೀಡುವವರಿಗೆ ಆದಾಯ ತೆರಿಗೆ ಕಾಯ್ದೆಯಡಿ ತೆರಿಗೆ ವಿನಾಯಿತಿ ಸಹ ಸಿಗಲಿದೆ.
ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಟ್ರಸ್ಟ್ ನಲ್ಲಿ ಜಿಲ್ಲಾಧಿಕಾರಿಗಳು ಉಪಾಧ್ಯಕ್ಷರು ಮತ್ತು ಸೆಟಲರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಉಳಿದಂತೆ ಲೋಕಸಭಾ ಸದಸ್ಯರು, ಕಲಬುರಗಿ ಉತ್ತರ ಮತ್ತು ಕಲಬುರಗಿ ದಕ್ಷಿಣ ವಿಧಾನಸಭಾ ಸದಸ್ಯರು, ನಗರ ಪೊಲೀಸ್ ಆಯುಕ್ತರು, ಎಸ್.ಪಿ., ಜಿಲ್ಲಾ ಪಂಚಾಯತ್ ಸಿ.ಇ.ಓ, ಮಹಾನಗರ ಪಾಲಿಕೆ ಆಯುಕ್ತರು, ಜಂಟಿ ಕೃಷಿ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪದನಿಮಿತ್ಯ ಸದಸ್ಯರಾಗಿದ್ದು, ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಟ್ರಸ್ಟಿನ ಎಲ್ಲಾ 12 ಟ್ರಸ್ಟಿಗಳು ಪದನಿಮಿತ್ತ ಸದಸ್ಯರಾಗಿರುತ್ತಾರೆ.
ಕಾರ್ಯಕ್ರಮದಲ್ಲಿ ಕರ್ನಾಟಕ ರೇಷ್ಮೆ ಉದ್ದಿಮೆಗಳ ನಿಗಮದ ನಿಯಮಿತದ ಅಧ್ಯಕ್ಷೆ ಹಾಗೂ ಉತ್ತರ ಶಾಸಕಿ ಕನೀಜ್ ಫಾತೀಮಾ, ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಶಾಸಕರುಗಳಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ್, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಜಿಲ್ಲಾ ಗ್ಯಾರಮಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರಿ, ಕಲಬುರಗಿ ಮಹಾನಗರ ಪಾಲಿಕೆಯ ಮಹಾಪೌರರಾದ ವರ್ಷಾ ರಾಜೀವ ಜಾನೆ, ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ., ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ರಾಹುಲ ಪಾಂಡ್ವೆ, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆಯ ಆಯುಕ್ತ ಅವಿನಾಶ ಶಿಂಧೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ಸಾಹಿತ್ಯ, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಸೇರಿದಂತೆ ಇತರೆ ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳು, ಉದ್ಯಮಿಗಳು, ಕಾರ್ಪೋರೇಟ್ ಕಂಪನಿ ಪ್ರತಿನಿಧಿಗಳು ಭಾಗವಹಿಸಿದ್ದರು.
ಫೌಂಡೇಷನ್ ಸದಸ್ಯ ಕಾರ್ಯದರ್ಶಿಯಾಗಿರುವ ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಅಬ್ದುಲ್ ಅಜೀಮ್ ಸ್ವಾಗತಿಸಿ ವಂದಿಸಿದರು. ಆರ್.ಜೆ.ವಾಣಿ ನಿರೂಪಿಸಿದರು.