ಪ್ರಬುದ್ದ ಸಮಾಜ ನಿರ್ಮಾಣಕ್ಕಾಗಿ ಆರೆಸ್ಸೆಸ್‌ನಿಂದ ದೂರವಿರಿ : ಯುವಕರಿಗೆ ಸಚಿವ ಪ್ರಿಯಾಂಕ್ ಖರ್ಗೆ ಕರೆ
ಕಲಬುರಗಿ: ಪ್ರಬುದ್ಧ ಸಮಾಜ ನಿರ್ಮಾಣವಾಗಬೇಕಾದರೆ ಸಂವಿಧಾನಕ್ಕೆ ಗೌರವ ನೀಡದ ಆರೆಸ್ಸೆಸ್ ಹಾಗೂ ಮನುವಾದಿ ಸಿದ್ಧಾಂತಗಳಿಂದ ಯುವಕರು ದೂರವಿರಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಕರೆ ನೀಡಿದರು.
ನಗರದ ಘಾಟ್ಗೆ ಲೇಔಟ್‌ನಲ್ಲಿ ನಿರ್ಮಾಣಗೊಂಡ ಪ್ರಬುದ್ಧ ಬುದ್ಧ ವಿಹಾರ ಉದ್ಘಾಟಿಸಿ ಮಾತನಾಡಿದ ಅವರು, ಡಾ. ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಕೊನೆಯ ಭಾಷಣದಲ್ಲಿ ನೀಡಿದ ಸಂದೇಶಗಳನ್ನು ಅಕ್ಷರಶಃ ಪಾಲಿಸಿದಾಗ ಮಾತ್ರ ಪ್ರಬುದ್ಧ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಹೇಳಿದರು.
ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವವರು ತಮ್ಮ ವೈಯಕ್ತಿಕ ಬದುಕಿನಲ್ಲಿ ಸೌಲಭ್ಯಗಳನ್ನು ಅನುಭವಿಸುತ್ತಿದ್ದಾರೆ. ಆದರೆ ಬಡವರು, ಹಿಂದುಳಿದವರು ಹಾಗೂ ಆದಿವಾಸಿಗಳ ಮಕ್ಕಳು ಮಾತ್ರ ಇಂತಹ ರಾಜಕೀಯದ ಹೊರೆ ಹೊರುತ್ತಿದ್ದಾರೆ ಎಂದು ಹೇಳಿದರು.
ಆರೆಸ್ಸೆಸ್ ಸಿದ್ದಾಂತ ಚೆನ್ನಾಗಿದ್ದರೆ, ಬಿಜೆಪಿ ಆರೆಸ್ಸೆಸ್ ನಾಯಕರ ಮಕ್ಕಳು ಯಾಕೆ ಗೋಮೂತ್ರ ಕುಡಿಯಲ್ಲ? ಇದು ಯಾವ ನ್ಯಾಯ. ಇಂತಹ ಒಳಸಂಚುಗಳನ್ನು ನೀವು ಅರ್ಥ ಮಾಡಿಕೊಳ್ಳಬೇಕು. ನಾನು ಇಂತಹ ಸಿದ್ದಾಂತಗಳನ್ನು ಧೈರ್ಯವಾಗಿ ಎದುರಿಸಿದ್ದೇನೆ ಹಾಗೂ ಪ್ರಶ್ನಿಸಿದ್ದೇನೆ. ಹಾಗಾಗಿ ನನಗೆ ದಿನಕ್ಕೆ ಕನಿಷ್ಠ 300 ಬೆದರಿಕೆ ಕರೆಗಳು ಬಂದಿವೆ. ಹಾಗೆ ನನಗೆ ಬೆದರಿಕೆ ಹಾಕಿದ ವ್ಯಕ್ತಿ ಈಗಲೂ ಜೈಲಿನಲ್ಲಿ ಇದ್ದಾನೆ. ಅವನ ಪರವಾಗಿ ಒಬ್ಬ ವಕೀಲರನ್ನು ಕೂಡಾ ಆರೆಸ್ಸೆಸ್ ನೇಮಿಸಿಲ್ಲ. ಆತನ ತಾಯಿ ನನಗೆ ಕರೆ ಮಾಡಿ, ತಮ್ಮ ಮಗ ಯಾಕೆ ಹಾಗೆ ಮಾಡಿದನೋ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾರೆ ಎಂದು ಖರ್ಗೆ ಹೇಳಿದರು.
ಆರೆಸ್ಸೆಸ್ ಪಥಸಂಚಲನ ಸಂಬಂಧ ನಡೆದ ಕಾನೂನು ಪ್ರಕ್ರಿಯೆಯನ್ನು ನೆನಪಿಸಿಕೊಂಡ ಖರ್ಗೆ, ಸಂವಿಧಾನ ಹಾಗೂ ಕಾನೂನಿನ ಶಕ್ತಿಯಿಂದಲೇ ಎಲ್ಲರೂ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಇದು ಸಂವಿಧಾನದ ಮಹತ್ವವನ್ನು ತೋರಿಸುತ್ತದೆ ಎಂದು ಹೇಳಿದರು.
ಬೌದ್ಧ ಧರ್ಮದಲ್ಲಿ ಸಮಾನತೆ, ಗೌರವ ಮತ್ತು ಸ್ವಾಭಿಮಾನಕ್ಕೆ ಮಹತ್ವವಿದೆ. ಇದನ್ನು ಅರಿತು ಡಾ.ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸಿದರು. ಅವರೊಂದಿಗೆ ಲಕ್ಷಾಂತರ ಜನರು ಈ ಧರ್ಮವನ್ನು ಅಳವಡಿಸಿಕೊಂಡರು ಎಂದು ಹೇಳಿದರು.
ನಮಗೆ ಸಂವಿಧಾನವೇ ಪ್ರಧಾನ. ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ತತ್ವಗಳು ಸಂವಿಧಾನದಲ್ಲಿ ಅಡಕವಾಗಿವೆ. ಸಂವಿಧಾನ ಇಲ್ಲದಿದ್ದರೆ ನಾವು ಇಂದು ಸ್ವತಂತ್ರವಾಗಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಬಾಬಾಸಾಹೇಬರ ಬರಹಗಳು ಇಂದಿಗೂ ಪ್ರಸ್ತುತವಾಗಿವೆ. ಪ್ರಬುದ್ಧ ಭಾರತ ನಿರ್ಮಾಣಕ್ಕೆ ಅವರ ವಿಚಾರಗಳು ಅನಿವಾರ್ಯವಾಗಿವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದ ವಿವಿಧ ಪ್ರದೇಶಗಳಲ್ಲಿ ಪ್ರಬುದ್ಧ ಬುದ್ಧ ವಿಹಾರಗಳನ್ನು ನಿರ್ಮಿಸಿ ಬುದ್ಧ–ಬಸವ–ಅಂಬೇಡ್ಕರ್ ವಿಚಾರಧಾರೆಯನ್ನು ಜನರಲ್ಲಿ ಬಿತ್ತರಿಸಬೇಕೆಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಬೌದ್ಧ ಧರ್ಮಗುರುಗಳು ಧಮ್ಮ ಸಂದೇಶ ನೀಡಿದರು. ವೇದಿಕೆಯಲ್ಲಿ ಬೌದ್ಧ ಧರ್ಮಗುರುಗಳು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.