ವೈಜ್ಞಾನಿಕ ಜಾಗೃತಿಯ ನಡುವೆಯೂ ಮೂಢನಂಬಿಕೆ ಉಳಿದಿರುವುದು ಚಿಂತಾಜನಕ: ಕಾಶಿನಾಥ ಗುತ್ತೇದಾರ ಕಳವಳ
ಚಿತ್ತಾಪುರ: ಸಮಾಜದಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಉದ್ದೇಶದಿಂದ ನಿರಂತರ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿದ್ದರೂ, ಜನರಲ್ಲಿ ಬೇರೂರಿರುವ ಮೂಢನಂಬಿಕೆಗಳು ಇನ್ನೂ ಹೋಗದಿರುವುದು ಆತಂಕಕಾರಿ ವಿಷಯವಾಗಿದೆ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಗೌರವ ಅಧ್ಯಕ್ಷ ಕಾಶಿನಾಥ ಗುತ್ತೇದಾರ ಹೇಳಿದರು.
ಪಟ್ಟಣದ ಬಜಾಜ್ ಕಲ್ಯಾಣ ಮಂಟಪದ ಸಭಾಭವನದಲ್ಲಿ ನಡೆದ ಪರಿಷತ್ತಿನ ನೂತನ ಪದಾಧಿಕಾರಿಗಳಿಗೆ ಗೌರವ ಸಮಾರಂಭ ಹಾಗೂ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಪವಾಡ ಬಯಲು ಖ್ಯಾತಿಯ ಹುಲಿಕಲ್ ನಟರಾಜ್ ಅವರು ರಾಜ್ಯದಾದ್ಯಂತ ಜನಮನದಲ್ಲಿ ಸ್ಥಾನ ಪಡೆದಿದ್ದು, ಸಂಘಟನೆ ಕಟ್ಟುವ ಮೊದಲು ಜನರಲ್ಲಿ ವೈಜ್ಞಾನಿಕ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ. ಇಂತಹ ಪ್ರಯತ್ನಗಳು ಸಮಾಜದಲ್ಲಿ ತಾರ್ಕಿಕ ಚಿಂತನೆ ಬೆಳೆಸಲು ಸಹಕಾರಿಯಾಗಿವೆ ಎಂದರು.
ಚಿತ್ತಾಪುರದಲ್ಲಿ ಕಳೆದ ಮೂರು ವರ್ಷಗಳಿಂದ ಪರಿಷತ್ತಿನ ವತಿಯಿಂದ ಬಸವ ಪಂಚಮಿ ಆಚರಣೆಯನ್ನು ವಿಭಿನ್ನ ರೀತಿಯಲ್ಲಿ ನಡೆಸಲಾಗುತ್ತಿದ್ದು, ಹಾಲನ್ನು ಪೋಲು ಮಾಡದೆ ಬಡ ಮಕ್ಕಳಿಗೆ ಹಂಚುವ ಮೂಲಕ ಮೌಢ್ಯ ಮುಕ್ತ ಸಮಾಜ-ನಮ್ಮ ನಡೆ ವಿಜ್ಞಾನದ ಕಡೆ ಎಂಬ ಸಂದೇಶವನ್ನು ಪರಿಣಾಮಕಾರಿಯಾಗಿ ಸಮಾಜಕ್ಕೆ ತಲುಪಿಸಲಾಗಿದೆ. ಮೌಢ್ಯ ವಿರೋಧಿ ಅಭಿಯಾನ, ಸಾರ್ವಜನಿಕ ಉಪನ್ಯಾಸಗಳು ಹಾಗೂ ಚರ್ಚಾ ಕಾರ್ಯಕ್ರಮಗಳ ಮೂಲಕ ಜನಜಾಗೃತಿ ಮೂಡಿಸುವ ಪ್ರಯತ್ನಗಳು ನಡೆದರೂ, ಮೂಢನಂಬಿಕೆಗಳು ಇನ್ನೂ ಸಮಾಜದಲ್ಲಿ ಗಟ್ಟಿಯಾಗಿ ಬೇರೂರಿರುವುದು ಚಿಂತನೆಗೆ ಕಾರಣವಾಗಿದೆ ಎಂದು ಹೇಳಿದರು.
ಪರಿಷತ್ತಿನ ನೂತನ ಕಾರ್ಯಕಾರಿಣಿಯಲ್ಲಿ ವೈದ್ಯರು, ಶಿಕ್ಷಕರು ಹಾಗೂ ವಿವಿಧ ಸಮುದಾಯಗಳ ಪ್ರಗತಿಪರರು ಸೇರಿರುವುದು ಶ್ಲಾಘನೀಯವಾಗಿದ್ದು, ಇಂತಹ ವೈವಿಧ್ಯಮಯ ತಂಡದಿಂದ ವೈಜ್ಞಾನಿಕ ಚಿಂತನೆ ಸಮಾಜದ ಎಲ್ಲ ವರ್ಗಗಳಿಗೆ ತಲುಪುವ ವಿಶ್ವಾಸವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸಭೆಯ ಅಧ್ಯಕ್ಷತೆ ವಹಿಸಿ ಶಾಂತಕುಮಾರ ಮಳಖೇಡ ಮಾತನಾಡಿ, ಜನರಲ್ಲಿ ವೈಜ್ಞಾನಿಕತೆಯ ಅರಿವು ಮೂಡಿಸುವುದು ನಮ್ಮ ಕರ್ತವ್ಯವಾಗಿದೆ. ಮೂಢನಂಬಿಕೆ ಕಂಡಾಗ ಖಂಡಿಸುವ ಮನೋಭಾವ ಬೆಳೆಸಬೇಕಿದೆ. ಪರಿಷತ್ತಿನ ವತಿಯಿಂದ ಇನ್ನಷ್ಟು ಪರಿಣಾಮಕಾರಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಸೋಮಶೇಖರ ಕಲಶೆಟ್ಟಿ, ಮೊಹೀನ ಸಾತನೂರ್, ಡೇವಿಡ್ ಸ್ಯಾಮುಯೆಲ್, ಚಂದ್ರಶೇಖರ ಶೇರಿ ಸೇರಿದಂತೆ ಇತರ ಪದಾಧಿಕಾರಿಗಳು ಮಾತನಾಡಿದರು.
ಸಭೆಯಲ್ಲಿ ಡಾ. ಸಂತೋಷಕುಮಾರ ಯಲ್ಲೇರಿ, ಸಾಬಣ್ಣ ಕಲಬುರ್ಗಿ, ಶ್ರೀದೇವಿ ಬೆಣ್ಣಿ, ಸುಜಾತಾ ದಂಡೋತಿ, ರವಿಶಂಕರ ಬುರ್ಲಿ, ಸುರೇಶ ಬೆನಕನಹಳ್ಳಿ, ಜಗನ್ನಾಥ ಮುಡಬೂಳಕರ, ಉಮಾಕಾಂತ ಸೇರಿದಂತೆ ಹಲವರು ಇದ್ದರು. ವಿರೂಪಾಕ್ಷರುದ್ರ ಬೆಣ್ಣಿ ನಿರೂಪಿಸಿದರು. ಅನಂತನಾಗ ದೇಶಪಾಂಡೆ ಸ್ವಾಗತಿಸಿದರು. ಜಗದೇವ ಕುಂಬಾರ ವಂದಿಸಿದರು.