ವಾಡಿ: ಸರ್ಕಾರಿ ಶಾಲೆಗಳನ್ನು ಉಳಿಸಲು ಎಐಡಿಎಸ್ಒ ಹೋರಾಟ
ವಾಡಿ: ವಿದ್ಯಾರ್ಥಿ ವಿರೋಧಿ ನೀತಿಗಳ ವಿರುದ್ಧ ದೇಶದಾದ್ಯಂತ ಬಲಿಷ್ಠ ವಿದ್ಯಾರ್ಥಿ ಚಳುವಳಿಗಳನ್ನು ಕಟ್ಟುತ್ತಿರುವ ಎಐಡಿಎಸ್ಒ ಸಂಘಟನೆಯ 72ನೇ ಸಂಸ್ಥಾಪನಾ ದಿನದ ಅಂಗವಾಗಿ ವಾಡಿ ಕಛೇರಿಯಲ್ಲಿ ಕಾರ್ಯಕ್ರಮ ಮಾಡಲಾಯಿತು.
ಈ ಸಂದರ್ಭದಲ್ಲಿ ಎಐಡಿಎಸ್ಒ ಜಿಲ್ಲಾ ಕೌನ್ಸಿಲ್ ಉಪಾಧ್ಯಕ್ಷರಾದ ಗೋವಿಂದ ಯಳವಾರ ಮಾತನಾಡಿ, ಕಳೆದ 7 ದಶಕಗಳಿಂದ ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆಯು ದೇಶದಾದ್ಯಂತ ಶೈಕ್ಷಣಿಕ ಸಮಸ್ಯೆಗಳ ವಿರುದ್ಧ ಬಲಿಷ್ಠವಾದ ವಿದ್ಯಾರ್ಥಿ ಚಳುವಳಿಗಳನ್ನು ಕಟ್ಟುತ್ತಾ ಬರುತ್ತಿದೆ. ವೈಜ್ಞಾನಿಕ, ಧರ್ಮನಿರಪೇಕ್ಷ, ಪ್ರಜಾಸತ್ತಾತ್ಮಕ ಹಾಗೂ ಸಾರ್ವತ್ರಿಕ ಶಿಕ್ಷಣ ನಮ್ಮದಾಗಬೇಕು ಎಂಬ ಧ್ಯೇಯದೊಂದಿಗೆ ಕೆಲಸ ಮಾಡುತ್ತಿರುವ ಎಐಡಿಎಸ್‌ಒ ಕರ್ನಾಟಕದಲ್ಲಿಯೂ ಸಹ ಬಹಳ ಸಕ್ರಿಯವಾಗಿ ಶಿಕ್ಷಣ ವಿರೋಧಿ ನೀತಿಗಳ ವಿರುದ್ಧ ಬಲಿಷ್ಠ ಚಳುವಳಿಗಳನ್ನು ಬೆಳೆಸುತ್ತಿದೆ ಎಂದರು.
ನವೋದಯದ ಮಹಾನ್ ಚೇತನಗಳಾದ ಈಶ್ವರಚಂದ್ರ ವಿದ್ಯಾಸಾಗರ್, ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ ಹಾಗೂ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ನೇತಾಜಿ ಹೀಗೆ ಅನೇಕರ ಮೂಲ ಆಶಯವಾದ ಸಾರ್ವಜನಿಕ ಶಿಕ್ಷಣವನ್ನು ಇಂದು ರಾಜ್ಯ ಕಾಂಗ್ರೆಸ್ ಸರ್ಕಾರ ಕೆಪಿಎಸ್ - ಮ್ಯಾಗ್ನೆಟ್ ಯೋಜನೆಯ ಹೆಸರಲ್ಲಿ ವ್ಯಾಪಾರಕ್ಕಿಟ್ಟಿದೆ. ದುಡಿಯುವ ವರ್ಗದ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವ ಹುನ್ನಾರದಿಂದ ಶಿಕ್ಷಣವನ್ನು ಖಾಸಗಿಯವರ ಮಡಿಲಿಗೆ ಹಾಕಲಾಗುತ್ತಿದೆ. ರಾಜ್ಯದಲ್ಲಿ 40,000 ಸರ್ಕಾರಿ ಶಾಲೆಗಳನ್ನು ಮುಚ್ಚುವುದರ ಮೂಲಕ ಶಾಶ್ವತವಾಗಿ ಬಡ ಮಕ್ಕಳಿಗಿರುವ ಜ್ಞಾನದ ಬಾಗಿಲನ್ನು ಮುಚ್ಚಿ, ಶಿಕ್ಷಣದಿಂದ ಸಂಪೂರ್ಣವಾಗಿ ಅವರನ್ನು ವಂಚಿತರನ್ನಾಗಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.
ನಮ್ಮ ದೇಶದ ನವೋದಯ ಚಿಂತಕರ, ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಕ್ರಾಂತಿಕಾರಿಗಳ ಹೋರಾಟ ಹಾಗೂ ಸಂಘರ್ಷಗಳ ಫಲವಾಗಿ ನಮಗೆ ದೊರೆತ ಈ ಶಿಕ್ಷಣದ ಹಕ್ಕನ್ನು ಕಸಿದು, ಅವರೆಲ್ಲರ ಆಶಯಗಳನ್ನು ಗಾಳಿಗೆ ತೂರಿ ಶಿಕ್ಷಣವನ್ನು ಕೇವಲ ಕೆಲವೇ ಜನರ ಸ್ವತ್ತಾಗಿಸಲು ರಾಜ್ಯ ಸರ್ಕಾರ ಹುನ್ನಾರ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಾಜದಲ್ಲಿ ಬೇರೂರಿರುವ ಜಾತಿ ಮನಸ್ಥಿತಿ ಹಾಗೂ ಮರ್ಯಾದೆ - ಹೀನ ಹತ್ಯೆಗಳು ಹೆಚ್ಚಾಗುತ್ತಿವೆ, ಹಿಂದೊಮ್ಮೆ ಎಲ್ಲಾ ರೀತಿಯ ಗುಲಾಮಗಿರಿಯ ವಿರುದ್ಧ ನಾವು ಸಿಡಿದೆದ್ದು ಜಾಗೃತರಾಗುವಂತೆ ಶಿಕ್ಷಣ ನಮ್ಮೆಲ್ಲರನ್ನು ಉಳಿಸಿತ್ತು, ನಾವೇ ಶಿಕ್ಷಣವನ್ನುಳಿಸಬೇಕಾದ ಸಂದರ್ಭ ಬಂದೊದಗಿದೆ. ಈ ಐತಿಹಾಸಿಕ ಜವಾಬ್ದಾರಿಯನ್ನು ಅರಿತು ಸಾರ್ವಜನಿಕ ಶಿಕ್ಷಣ ಉಳಿಸಲು ಸಂಕಲ್ಪ ತೊಡೋಣ. ಇಂತಹ ಪರಿಸ್ಥಿಯ ವಿರುದ್ಧ ಪ್ರಬಲವಾದ ಜನ ಹೋರಾಟಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಎಐಡಿಎಸ್ಒ ಜಿಲ್ಲಾ ಕೌನ್ಸಿಲ್ ಕಾರ್ಯದರ್ಶಿಗಳಾದ ಸಂಪತ್ ಗೌಂಡಿ ವಿದ್ಯಾರ್ಥಿಗಳಾದ ಅನಿಕೇತ್, ಪ್ರೀತಮ್, ಕಾರ್ತಿಕ್, ಬಾಗೇಶ್, ಶ್ರೀಧರ್, ರಿತ್ವಿಕ್ ವಿಶಾಲ ಸೇರಿದಂತೆ ಹಲವರರಿದ್ದರು.