ಕೋಲಿ ಸಮಾಜ ಎಸ್ಟಿ ಪಟ್ಟಿಗೆ ಸೇರ್ಪಡೆಗೆ ಪ್ರಿಯಾಂಕ್ ಖರ್ಗೆ ಭರವಸೆ: ಹೋರಾಟ ಹಿಂಪಡೆಯುವಂತೆ ತಿಪ್ಪಣ್ಣಪ್ಪ ಕಮಕನೂರ್ ಒತ್ತಾಯ
ಕಲಬುರಗಿ: ಕೋಲಿ, ಕಬ್ಬಲಿಗ, ಅಂಬಿಗ, ಬೆಸ್ತ, ಬಾರಿಕ್ ಸಮಾಜಗಳನ್ನು ಪರಿಶಿಷ್ಟ ಪಂಗಡ (ಎಸ್ಟಿ) ಪಟ್ಟಿಗೆ ಸೇರ್ಪಡೆಗೆ ಆಗ್ರಹಿಸಿ ಡಿ.29 ರಂದು ನಡೆಸುತ್ತಿರುವ ಬೃಹತ್ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದುಕೊಳ್ಳಿ ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್ ಅವರು ಸಂಘಟಕರಿಗೆ ಒತ್ತಾಯಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಿಪ್ಪಣ್ಣಪ್ಪ ಕಮಕನೂರ್, ಕೋಲಿ, ಕಬ್ಬಲಿಗ ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡುವಂತೆ ಹಲವು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ಈಗ ಕಲಬುರಗಿ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ನಮ್ಮ ಸಮುದಾಯವನ್ನು ಎಸ್ಟಿ ಸೇರ್ಪಡೆ ಮಾಡಿಸಲು ಭರವಸೆ ನೀಡಿದ್ದಾರೆ, ಹಾಗಾಗಿ ಸೋಮವಾರ ಹಮ್ಮಿಕೊಂಡಿರುವ ಪ್ರತಿಭಟನೆಯನ್ನು ವಾಪಸ್ ಪಡೆಯಬೇಕೆಂದು ಹೇಳಿದರು.
ತಳವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡುವಲ್ಲಿ ಕ್ರಮ ವಹಿಸುವುದಾಗಿ ನಾವು ತಿಳಿಸಿದ್ದೆವು. ಇದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಸಹ ಭರವಸೆ ನೀಡಿದಂತೆ ತಳವಾರ ಸಮುದಾಯಕ್ಕೆ ಪ್ರಮಾಣ ಪತ್ರ ಒದಗಿಸುವಂತೆ ಸರಕಾರದಿಂದ ಆದೇಶ ಹೊರಡಿಸುವಲ್ಲಿ ಪ್ರಾಮಾಣಿಕ ಪಾತ್ರ ವಹಿಸಿದ್ದಾರೆ. ಇದೀಗ ಅದರಂತೆಯೂ ಕೋಲಿ, ಕಬ್ಬಲಿಗ, ಅಂಬಿಗ, ಬೆಸ್ತ, ಬಾರಿಕ್ ಸಮಾಜಗಳನ್ನು ಪರಿಶಿಷ್ಟ ಪಂಗಡ (ಎಸ್ಟಿ) ಪಟ್ಟಿಗೆ ಸೇರ್ಪಡೆಗಾಗಿ ಸಚಿವ ಖರ್ಗೆ ಅವರು ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಇಂತಹ ವೇಳೆಯಲ್ಲಿ ಹೋರಾಟ ಮಾಡುವುದು ಸೂಕ್ತವಲ್ಲ ಎಂದರು.
12ನೇ ಶತಮಾನದಲ್ಲಿ ಹೆಸರು ಮಾಡಿದ ನಮ್ಮ ಸಮಾಜದ ಅಂಬಿಗರ ಚೌಡಯ್ಯನವರ ಐಕ್ಯ ಸ್ಥಳದ ಅಭಿವೃದ್ಧಿಗೆ ಚರ್ಚೆ ನಡೆಸಲಾಗಿದೆ. ಸದ್ಯ ಸ್ಥಳ ಪುರಾತತ್ವ ಇಲಾಖೆಯಲ್ಲಿದ್ದನ್ನು ರಾಜ್ಯ ಸರಕಾರದ ಅಧೀನತೆಗೆ ತೆಗೆದುಕೊಳ್ಳಲು ಮಾತುಕತೆ ನಡೆಸಲಾಗಿದೆ. ಅದರಂತೆಯೇ ವಿಧಾನ ಸೌಧದ ಎದುರುಗಡೆ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಕೂಡ ಸ್ಥಾಪನೆಗೆ ಒಪ್ಪಿಗೆ ಸಿಗುತ್ತಿದೆ. ಹೀಗೆ ನಮ್ಮ ಸಮುದಾಯಕ್ಕೆ ಅನೇಕ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಸರಕಾರವು, ಎಸ್ಟಿ ಸೇರ್ಪಡೆ ಕುರಿತಾಗಿಯೂ ಪ್ರಗತಿಯಲ್ಲಿಟ್ಟುಕೊಂಡಿದೆ. ಶೀಘ್ರದಲ್ಲೇ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸುತ್ತದೆ ಎಂದು ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರ ಭರವಸೆ ನೀಡಿದರು.
ಜನರನ್ನು ದಿಕ್ಕುತಪ್ಪಿಸಲು 29 ರಂದು ಹೋರಾಟ ಕೈಗೊಳ್ಳಲಾಗುತ್ತಿದೆ, ಕೂಡಲೇ ಸಂಘಟಕರು ಈ ಹೋರಾಟವನ್ನು ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್, ಭೀಮಣ್ಣ ಸಾಲಿ, ರಾಜಗೋಪಾಲರೆಡ್ಡಿ, ಅವ್ವಣ್ಣ ಮ್ಯಾಕೇರಿ, ಬಸವರಾಜ ಬೂದಿಹಾಳ, ರಮೇಶ್ ನಾಟೀಕಾರ, ಶಾಂತಪ್ಪ ಕೂಡಿ, ಸಾಯಬಣ್ಣ ಜಾಲಗಾರ್, ಶರಣು ಭಾಗೋಡಿ, ಶಿವು ಹೊನಗುಂಟಿ, ಶಿವಕುಮಾರ್ ಯಾಗಪುರ, ಮಹಾರಾಯ ಅಗಸಿ, ಬಸವರಾಜ ಗುಂಡಲಗೇರಿ, ಪ್ರಕಾಶ್ ಜಮಾದಾರ, ಗುಂಡು ಐನಾಪುರ, ಸಂತೋಷ್ ತಳವಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.