×
Ad

ಕಳೆದ ಹತ್ತು ವರ್ಷದಲ್ಲಿ ನೀಡಿದ ಯಾವ ಭರವಸೆಯನ್ನೂ ಪ್ರಧಾನಿ ಮೋದಿ ಈಡೇರಿಸಿಲ್ಲ : ಸಿಎಂ ಸಿದ್ದರಾಮಯ್ಯ

Update: 2024-04-24 16:22 IST

Photo: x/@siddaramaiah

ಕಲಬುರಗಿ : ಕಳೆದ ಹತ್ತು ವರ್ಷದಲ್ಲಿ ಮೋದಿಯವರು ತಾವು ನೀಡಿದ ಯಾವ ಭರವಸೆಯನ್ನೂ ಈಡೇರಿಸಿಲ್ಲ, ಪ್ರತಿವರ್ಷ ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು. ಈ ಉದ್ಯೋಗಗಳು ಎಲ್ಲಿ ಹೋದವು?. 15 ಲಕ್ಷ ರೂ. ಹಣ ನೀಡುವುದಾಗಿ ಹೇಳಿದ್ದರು, ಆ ಹಣ ಎಲ್ಲಿ‌ಹೋಯಿತು ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಅವರು ಅಫಜಲಪುರ ತಾಲ್ಲೂಕಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಗ್ಯಾರಂಟಿ ಯೋಜನೆ ಜಾರಿಗೆ ತಂದರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಮೋದಿ ಹೇಳಿದ್ದರು. ನಮ್ಮ ಸರ್ಕಾರ ಅಧಿಕಾರಕ್ಕೆ‌ ಬಂದ ಮೇಲೆ ಜಾರಿಗೆ ತಂದಿದ್ದೇನೆ. ನಮ್ಮ ಸರ್ಕಾರ ದಿವಾಳಿಯಾಗಿದೆಯಾ? ಮೋದಿ ಸುಳ್ಳು ಹೇಳುತ್ತಾರೆ. ಬಿಜೆಪಿ ಸುಳ್ಳಿನ ಕಾರ್ಖಾನೆಯಾಗಿದೆ. ಸುಳ್ಳು ಇವರ ಮನೆ ದೇವರು. ಲೋಕಸಭೆ ಚುನಾವಣೆ ನಂತರ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಾರೆ ಎಂದು ಬಿಜೆಪಿಯವರ ಸುಳ್ಳು ಹೇಳುತ್ತಿದ್ದಾರೆ. ಆದರೆ ನಾನು ಹೇಳುತ್ತೇನೆ, ನಾವು ಬಸವಣ್ಣನವರ ಅನುಯಾಯಿಗಳು ಕೊಟ್ಟ ಮಾತನ್ನು ಮೀರುವುದಿಲ್ಲ ಎಂದು ಭರವಸೆ ನೀಡಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ವಾರ್ಷಿಕ 52,000 ಕೋಟಿ ರೂ. ಖರ್ಚು ಮಾಡಲಿದ್ದೇವೆ. ಈವರೆಗೆ 195 ಕೋಟಿ ಮಹಿಳೆಯರು ಶಕ್ತಿ ಯೋಜನೆ ಲಾಭ ಪಡೆದುಕೊಂಡಿದ್ದಾರೆ. ನಾನು ಸಿಎಂ ಇದ್ದಾಗ ಅನ್ನಭಾಗ್ಯ ಯೋಜನೆಯಡಿಯಲ್ಲಿ ಪ್ರತಿಯೊಬ್ಬರಿಗೆ ಏಳು ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಡುತ್ತಿದ್ದೆ. ನಂತರ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಏಳು ಕೆಜಿಯಿಂದ ಐದು ಕೆಜಿಗೆ ಇಳಿಸಿದರು. ನಮ್ಮ ಸರ್ಕಾರ ಪುನಃ ಅಧಿಕಾರಕ್ಕೆ ಬಂದ ನಂತರ ಅಕ್ಕಿ‌ ಖರೀದಿಗೆ ಹಣ ನೀಡುತ್ತಿದ್ದೇವೆ. ಗೃಹ ಜ್ಯೋತಿ ಅಡಿಯಲ್ಲಿ 200 ಯೂನಿಟ್ ವಿದ್ಯುತ್ ಉಚಿತ ನೀಡಲಾಗುತ್ತಿದೆ. ನಮ್ಮ ಗ್ಯಾರಂಟಿಗಳನ್ನೇ ಮೋದಿ ಹೈಜಾಕ್ ಮಾಡಿ ಅದಕ್ಕೆ ಮೋದಿ ಗ್ಯಾರಂಟಿ ಎಂದು ಹೆಸರಿಟ್ಟಿದ್ದಾರೆ ಎಂದು‌ ಟೀಕಿಸಿದರು.

 ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ :

ಸಂಸತ್ತಿನಲ್ಲಿ ರಾಜ್ಯ ಸರ್ಕಾರದ ಪರ ಧ್ವನಿ ಎತ್ತದ ಜಾಧವ್ ಯಾಕೆ ಗೆಲ್ಲಬೇಕು? ಶಾ, ನಡ್ಡಾ, ನಿರ್ಮಲ ಸೀತಾರಾಮನ್ ಸೇರಿ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ. 15 ನೆಯ ಹಣಕಾಸು ಆಯೋಗದ  5495 ಕೋಟಿ‌ ರೂ. ಸೇರಿದಂತೆ ರಾಜ್ಯಕ್ಕೆ ಘೋಷಿತ 11495 ಕೋಟಿ ಅನುದಾನ ಬಿಡುಗಡೆ ಮಾಡಲಿಲ್ಲ. ರಾಜ್ಯದಲ್ಲಿ ಭೀಕರ ಬರಗಾಲವಿದೆ. ಲಕ್ಷಾಂತರ ಹೆಕ್ಟೇರ್ ಪ್ರದೇಶ ಬೆಳೆ ಹಾನಿಯಾಗಿದೆ. ಬರ ಪರಿಹಾರವಾಗಿ 18171 ಕೋಟಿ ರೂ‌. ಬಿಡುಗಡೆ ಮಾಡಲು ಪರಿಪರಿಯಾಗಿ ಬೇಡಿಕೊಂಡರೂ ಕ್ಯಾರೆ ಅನ್ನಲಿಲ್ಲ‌. ಹಾಗಾಗಿ‌ ಅನಿವಾರ್ಯವಾಗಿ ಸುಪ್ರಿಂ ಕೋರ್ಟ್ ಗೆ ಹೋಗಬೇಕಾಯಿತು. ಆಗ ಅಟಾರ್ನಿ ಜನರಲ್ ಇತ್ಯರ್ಥಪಡಿಸುವುದಾಗಿ ಒಂದು ವಾರ ಸಮಯ ಕೇಳಿದ್ದಾರೆ. ನಾವು ಸುಪ್ರಿಂಗೆ ಹೋಗಿರದೇ ಇದ್ದರೆ, ನಮಗೆ ಈ ಭರವಸೆ ಸಿಗುತ್ತಿರಲಿಲ್ಲ.‌ ನಿರ್ಮಲಾ ಸೀತರಾಮನ್ ಅವರು ರಾಜ್ಯ ಸರ್ಕಾರ ಬರಪರಿಹಾರ ಕೇಳಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಹಣ ಕೇಳುತ್ತಿದ್ದಾರೆ ಎಂದು ಸುಳ್ಳು ಹೇಳಿದ್ದಾರೆ‌. ನಿರ್ಮಲಾ ಅವರೇ ನಮಗೆ ಗ್ಯಾರಂಟಿಗಾಗಿ ಹಣ ಬೇಡ ನಮಗಿರುವ ಸಂಪನ್ಮೂಲ ಗಳಿಂದ ಅದನ್ನು ಭರಿಸುತ್ತೇವೆ ಎಂದು ತಿರುಗೇಟು ನೀಡಿದರು.

ಸಂವಿಧಾನ ಅಪಾಯದಲ್ಲಿದೆ. ಪ್ರಜಾ ಪ್ರಭುತ್ವ ಉಳಿಯಬೇಕಾದರೆ‌ ಕಾಂಗ್ರೆಸ್ ಅಧಿಕಾರಕ್ಕೆ ಬರಲೇಬೇಕು. ಅವಕಾಶದಿಂದ ವಂಚಿತರಾದವರಿಗೆ ನ್ಯಾಯ ಕೊಡಿಸಬೇಕಾದರೆ ನೀವೆಲ್ಲ ಕಾಂಗ್ರೆಸ್ ಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.

ಕುರುಬ ಗೊಂಡ, ಕುರುಬ ಕೋಲಿ ಸಮಾಜವನ್ನು ಎಸ್ ಟಿ‌ ಸೇರಿಸಲು ಕೇಂದ್ರಕ್ಕೆ ಪ್ರಸ್ತಾವ ಕಳಿಸಲಾಗಿದೆ. ಜಾಧವ್ ಈ ಬಗ್ಗೆ ಧ್ವನಿ ಎತ್ತಿದ್ದಾರೆಯೇ?.  ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಈ‌ ಸಮುದಾಯಗಳನ್ನು ಎಸ್ ಟಿ‌ ಸೇರಿಸುವುದಾಗಿ ಭರವಸೆ ನೀಡಿದರು.

ಖರ್ಗೆ ಹಾಗೂ ಧರಂಸಿಂಗ್ ಇಲ್ಲದೇ ಹೋಗಿದ್ದರೆ ಈ ಭಾಗಕ್ಕೆ ಆರ್ಟಿಕಲ್ 371 J ಜಾರಿಗೆ ಬರುತ್ತಲೇ ಇರಲಿಲ್ಲ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಅಂದಿನ ಗೃಹ ಸಚಿವರಾಗಿದ್ದ ಲಾಲಕೃಷ್ಣ ಅಡ್ವಾನಿ‌ ಈ ಬೇಡಿಕೆಯನ್ನು ತಿರಸ್ಕರಿಸಿದ್ದರು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಖರ್ಗೆ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರ ಮೇಲೆ ಒತ್ತಡ ತಂದು ಜಾರಿಗೆ ತರಲು ಶ್ರಮಿಸಿದ್ದಾರೆ. ಈ ಭಾಗದ ಜನರು ಇದನ್ನು ಮರೆಯಬಾರದು ಎಂದು ತಿಳಿಸಿದರು.

ಕಳೆದ ಐವತ್ತು ವರ್ಷದಿಂದ ಮಲ್ಲಿಕಾರ್ಜುನ ಖರ್ಗೆ ಅವರು ಈ ಭಾಗದ ಜನರ ಧ್ವನಿಯಾಗಿ ಲೋಕಸಭೆ ಹಾಗೂ ರಾಜ್ಯ ಸಭೆಯಲ್ಲಿ ಕೆಲಸ ಮಾಡಿದ್ದಾರೆ. ಈ ಸಲ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರಿಗೆ ಆಶೀರ್ವಾದ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News