ಕಲಬುರಗಿ | ರಸ್ತೆ ಅಪಘಾತಗಳ ತಡೆಗೆ ಜನರ ಸಹಭಾಗಿತ್ವ ಅಗತ್ಯ: ಡಾ.ಶರಣಪ್ಪ ಎಸ್.ಡಿ
ಕಲಬುರಗಿ: ರಸ್ತೆ ಅಪಘಾತಗಳ ಸಂಖ್ಯೆ ಕಡಿಮೆ ಮಾಡಲು ಪೊಲೀಸರದಷ್ಟೇ ಜವಾಬ್ದಾರಿ ಅಲ್ಲ, ಇಲ್ಲಿ ಜನರ ಸಹಭಾಗಿತ್ವವೂ ಅಗತ್ಯ ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಎಸ್.ಡಿ. ಶರಣಪ್ಪ ಹೇಳಿದ್ದಾರೆ.
ಶುಕ್ರವಾರ ನಗರದ ಎಸ್.ವಿ.ಪಿ ವೃತ್ತದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಸಮಾರೋಪದ ಅಂಗವಾಗಿ ಕಲಬುರಗಿ ನಗರ ಪೊಲೀಸ್ ಹಾಗೂ ಯುನೈಟೆಡ್ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ರಸ್ತೆ ಸುರಕ್ಷತೆಯನ್ನು ಖಚಿತಪಡಿಸುವುದು ಪೊಲೀಸರ ಜವಾಬ್ದಾರಿಯಷ್ಟೇ ಅಲ್ಲ, ಇದು ಪ್ರತಿಯೊಬ್ಬ ನಾಗರಿಕನ ಸಾಮಾಜಿಕ ಹೊಣೆಗಾರಿಕೆಯೂ ಆಗಿದೆ. ಪ್ರತಿಯೊಬ್ಬರೂ ಸ್ವಯಂಪ್ರೇರಿತವಾಗಿ ಸುರಕ್ಷಿತ ಚಾಲನಾ ಕ್ರಮಗಳನ್ನು ಅನುಸರಿಸಿ, ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದಾಗ ಮಾತ್ರ ರಸ್ತೆ ಅಪಘಾತಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಸಾಧ್ಯ ಎಂದು ಹೇಳಿದರು.
ನಮ್ಮ ಅಜಾಗರೂಕ ಚಾಲನೆ ನಮ್ಮ ಜೀವಕ್ಕೂ, ಇತರರ ಜೀವಕ್ಕೂ ಅಪಾಯಕಾರಿಯಾಗಬಹುದು ಎಂಬ ಅರಿವು ಎಲ್ಲರಲ್ಲೂ ಇರಬೇಕು. ಸಂಚಾರ ನಿಯಮಗಳನ್ನು ನಿಷ್ಠೆಯಿಂದ ಪಾಲಿಸಿದರೆ ಬಹುತೇಕ ಎಲ್ಲಾ ರಸ್ತೆ ಅಪಘಾತಗಳನ್ನು ತಪ್ಪಿಸಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಯುನೈಟೆಡ್ ಕಾಲೇಜ್ ಆಫ್ ಫಿಸಿಯೋಥೆರಪಿಯ ಮುಖ್ಯಸ್ಥ ಡಾ. ಅಬ್ದುಲ್ ಹಕೀಮ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಿಸಿಪಿ ಪ್ರವೀಣ್ ಎಚ್. ನಾಯಕ್, ಎಸಿಪಿ ಶರಣಬಸಪ್ಪ ಸುಬೇದಾರ್, ಸುಧಾ ಆದಿ, ಸೇರಿದಂತೆ ಸಂಚಾರ ವಿಭಾಗ–1 ಮತ್ತು 2ರ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಯುನೈಟೆಡ್ ಆಸ್ಪತ್ರೆಯ ವತಿಯಿಂದ ಸಾರ್ವಜನಿಕರಿಗೆ ಹೆಲ್ಮೆಟ್‌ಗಳು ಹಾಗೂ ಪ್ರಥಮ ಚಿಕಿತ್ಸಾ ಕಿಟ್‌ಗಳನ್ನು ವಿತರಿಸಲಾಯಿತು.