×
Ad

ಕಲಬುರಗಿ| ಬಾಲ್ಯ ವಿವಾಹ ತಡೆಯುವುದು ನಮ್ಮೆಲ್ಲರ ಮೊದಲ ಆದ್ಯತೆಯಾಗಬೇಕು: ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್

Update: 2025-08-06 22:50 IST

ಕಲಬುರಗಿ: ಮಹಿಳೆಯರ ಮತ್ತು ಹೆಣ್ಣು ಮಕ್ಕಳ ರಕ್ಷಣೆ ನಿಟ್ಟಿನಲ್ಲಿ ಅರಿವು ಮೂಡಿಸುವ ಮಿಷನ್ ಸುರಕ್ಷಾ ಮಿಷನ್ ಅಭಿಯಾನ ಕಲಬುರಗಿ ಜಿಲ್ಲೆಯಾದ್ಯಂತ ವ್ಯಾಪಕವಾಗಿ ನಡೆಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಡಿಸಿ ಬಿ.ಫೌಝಿಯಾ ತರನ್ನುಮ್ ಅವರು ಖಡಕ್ ಸೂಚನೆ ನೀಡಿದರು.

ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಹಿಳಾ ಮತ್ತು‌ ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಕುರಿತು ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಫೌಝಿಯಾ ತರನ್ನುಮ್, ಮಹಿಳೆಯರ ಮತ್ತು ಮಕ್ಕಳ ರಕ್ಷಣೆ‌ ನಿಟ್ಟಿನಲ್ಲಿ ಗ್ರಾಮ ಪಂಚಾಯತ್‌ ಕಾವಲು ಸಮಿತಿ ರಚನೆಯಾಗಿದ್ದು, ಇದುವರೆಗೆ ಸಭೆ ನಡೆಸದವರು ಮುಂದಿನ ಒಂದು ತಿಂಗಳಲ್ಲಿ ಸಭೆ ನಡೆಸಬೇಕು ಎಂದರು.

ಜಿಲ್ಲೆಯಾದ್ಯಂತ ಬಾಲ್ಯ ವಿವಾಹ ತಡೆಯಬೇಕು. ಬಾಲ್ಯ ವಿವಾಹದ ನಂತರ ಪ್ರಕರಣ ದಾಖಲಿಸುವುದಷ್ಟೆ ನಮ್ಮ‌ ಕೆಲಸವಾಗಬಾರದು. ಬಾಲ್ಯ ವಿವಾಹ ತಡೆಯುವುದು ನಮ್ಮೆಲ್ಲರ ಮೊದಲ ಆದ್ಯತೆಯಾಗಬೇಕು. ಬಾಲ ಗರ್ಭಿಣಿಯರ ಬಗ್ಗೆ ಆರೋಗ್ಯ ಇಲಾಖೆ ಎಚ್ಚರ ವಹಿಸಬೇಕು  ಎಂದು ಹೇಳಿದರು.

ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ ಪ್ರಗತಿ ಪರಿಶೀಲನಾ ವೇಳೆ ಡಿಸಿ ಬಿ.ಫೌಝಿಯಾ ತರನ್ನುಮ್ ಮಾತನಾಡಿ, ಅಂಗನವಾಡಿ ಕೇಂದ್ರದಲ್ಲಿ 6 ವರ್ಷದೊಳಗಿನ ಮಕ್ಕಳು, ಗರ್ಭಿಣಿ ಮಹಿಳೆಯರು, ಬಾಣಂತಿಯರ ಮುಖ ಗುರುತಿಸುವಿಕೆ ಆಧಾರದ ಮೇಲೆ ಅನುದಾನ ಬಿಡುಗಡೆಯಾಗಬೇಕು. ಫಲಾನುಭವಿಗಳ ಶೇ.100ರಷ್ಟು ಮುಖ ಗುರುತಿಸುವಿಕೆ ಕಾರ್ಯ ಪೂರ್ಣಗೊಳಿಸಬೇಕು ಎಂದು ಹೇಳಿದರು.  

ಮಹಿಳಾ‌ ಸ್ತ್ರೀ ಶಕ್ತಿ ಗುಂಪುಗಳು ಆದಾಯೋತ್ಪನ್ನ ಚಟುಚಟಿಕೆಯಲ್ಲಿ ಭಾಗವಹಿಸುವಂತಾಗಲು ಪ್ರೋತ್ಸಾಹ ನೀಡಬೇಕು. ಸಂಚಾರಿ ಕ್ಯಾಂಟಿನ್, ರೊಟ್ಟಿ ತಯಾರಿಕೆ, ಕೇಕ್ ತಯಾರಿಕೆ, ವಾಹನ ಚಾಲನೆ ತರಬೇತಿ ಕೊಟ್ಟು ವಾಹನದ ಮೂಲಕ ತಮ್ಮ ಉತ್ಪನ್ನಗಳ ಮಾರಾಟ ಮಾಡುವಂತಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಆಲೋಚನೆ ಮಾಡಬೇಕು ಎಂದು ತಿಳಿಸಿದರು.

ಕಲಬುರಗಿ ನಗರ ಮತ್ತು ತಾಲೂಕು ಕೇಂದ್ರದ ಪ್ರಮುಖ ವೃತ್ತಗಳಲ್ಲಿ, ರಸ್ತೆಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಸಾರ್ವಜನಿಕರಿಗೆ ಹಣ ಕೇಳುತ್ತಿದ್ದು, ಇದು ಸಾಮಾನ್ಯ ನಾಗರಿಕರಿಗೆ ತುಂಬಾ ಕಿರಿಕಿರಿಯಾಗುತ್ತಿದೆ. ಇದನ್ನು ತಪ್ಪಿಸಿ ಅವರನ್ನು ಮುಖ್ಯ ವಾಹಿನಿಗೆ ತರಬೇಕು. ದಮನಿತ‌ ಮಹಿಳೆಯರು, ಮಾಜಿ ದೇವಾದಾಸಿ ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ವಿವಿಧ ವಸತಿ ಯೋಜನೆಯಡಿ ವಸತಿ ಸೌಲಭ್ಯ ಕಲ್ಪಿಸಬೇಕು. ಲಿಂಗತ್ವ ಅಲ್ಪಸಂಖ್ಯಾತರಿಗೆ ಟ್ರಾನ್ಸ್ ಜೆಂಡರ್ ಕಾರ್ಡ್ ನೀಡಿ ಅವರನ್ನು ಗುರುತಿಸಬೇಕು. ನಂತರ ಅವರಿಗೆ ಸ್ವಯಂ ಉದ್ಯೋಗ ತರಬೇತಿ ಕೊಡಬೇಕು. ನರೇಗಾ ಜಾಬ್ ಕಾರ್ಡ್ ನೀಡಿ ಉದ್ಯೋಗ ಕೊಡಿಸಬೇಕು. ಪ್ರತಿಯೊಬ್ಬರು ಗೌರವದಿಂದ ಬದುಕಬೇಕು ಎಂದರು.

ಜಿಲ್ಲೆಯಾದ್ಯಂತ 26 ಮಾಜಿ‌ ದೇವದಾಸಿಯರಿಗೆ, 22 ಜನ ಲಿಂಗತ್ವ ಅಲ್ಪಸಂಖ್ಯಾತರಿಗೆ ಹಾಗೂ 21 ಜನ‌ ದಮನಿತ‌ ಮಹಿಳೆಯರಿಗೆ ವಿವಿಧ ವಸತಿ ಯೋಜನೆಯಡಿ ಕೆಸರಟಗಿ ಬಳಿ ರಾಜೀವ ಗಾಂಧಿ ಅವಾಸ್ ನಿಗಮದಿಂದ ನಿರ್ಮಿಸಕಾಗಿರುವ ಜಿ+3 ಬಹುಮಹಡಿಗಳಲ್ಲಿ ಮನೆ‌ ಹಂಚಿಕೆ ಮಾಡಿದ್ದು, ಇನ್ನಷ್ಟೆ ಹಕ್ಕು ಪತ್ರ ವಿತರಣೆ ಮಾಡಬೇಕಿದೆ ಎಂದು ಅಧಿಕಾರಿ ಶಾಂತಲಾ ಅವರು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ ನವಲೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಕುಮಾರ ರಾಠೋಡ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಜಗದೇವಪ್ಪ, ಡಿಡಿಪಿಐ ಸೂರ್ಯಕಾಂತ ಮದಾನೆ, ಡಿಎಚ್ ಓ ಡಾ.ಶರಣಬಸಪ್ಪ ಕ್ಯಾತನಾಳ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುಳಾ ಪಾಟೀಲ, ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಅಬ್ದುಲ್ ಅಜೀಮ್, ಆರ್.ಸಿ.ಎಚ್.ಓ ಡಾ.ಸಿದ್ರಾಮ ಪಾಟೀಲ ಸೇರಿದಂತೆ ತಾಲೂಕಿನ ಸಿಡಿಪಿಓಗಳು ಹಾಗೂ ಇತರೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News