ಸಚಿವ ಸಂಪುಟ ವಿಸ್ತರಣೆ ಸಿಎಂ ಆದ್ಯತೆ; ನನಗೆ ನೀಡಿರುವ ಜವಾಬ್ದಾರಿ ನಿಭಾಯಿಸುತ್ತಿದ್ದೇನೆ : ಪ್ರಿಯಾಂಕ್ ಖರ್ಗೆ

Update: 2026-08-10 13:29 IST

ಕಲಬುರಗಿ : ರಾಜ್ಯದಲ್ಲಿ 224 ವಿಧಾನಸಭಾ ಸದಸ್ಯರ ಪೈಕಿ ಶೇ.15ರಷ್ಟು ಮಂದಿಗೆ ಮಾತ್ರ ಸಚಿವ ಸ್ಥಾನ ನೀಡಲು ಅವಕಾಶವಿದ್ದು, 135 ಶಾಸಕರಿರುವ ಸಂದರ್ಭದಲ್ಲಿ ಯಾರನ್ನು ಸಚಿವರನ್ನಾಗಿ ಮಾಡಬೇಕು, ಯಾರನ್ನು ಕೈಬಿಡಬೇಕು ಎಂಬುದು ಮುಖ್ಯಮಂತ್ರಿಗಳಿಗೆ ಇರುವ ಸವಾಲಾಗಿದೆ ಎಂದು ಗೃಹ, ಐ.ಟಿ-ಬಿ.ಟಿ ಹಾಗೂ ಇ-ಆಡಳಿತ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಕಲಬುರಗಿ ತಾಲೂಕಿನ ಅವರಾದ ಬಿ.ಗ್ರಾಮಕ್ಕೆ ಭೇಟಿ ನೀಡಿ ಮುಂಗಾರು ಮಳೆಯ ಕೊರತೆಯಿಂದ ಹಾನಿಗೊಳಗಾದ ಬೆಳೆ ಪ್ರದೇಶಗಳನ್ನು ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕ್ಯಾಬಿನೆಟ್‌ನಲ್ಲಿ ಯಾರು ಇರಬೇಕು, ಯಾರು ಇರಬಾರದು ಎಂಬುದು ನನ್ನ ಆದ್ಯತೆಯಲ್ಲ. ಅದು ಮುಖ್ಯಮಂತ್ರಿಗಳ ಆದ್ಯತೆ. ಮುಖ್ಯಮಂತ್ರಿಗಳಿಗೆ ಕೇಳಬೇಕಾದ ಪ್ರಶ್ನೆಯನ್ನು ನನಗೆ ಕೇಳಿದರೆ ಹೇಗೆ ಉತ್ತರಿಸಲು ಸಾಧ್ಯ?” ಎಂದು ಹೇಳಿದರು.

“ನನಗೆ ಗೃಹ ಸಚಿವರ ಜವಾಬ್ದಾರಿ ನೀಡಲಾಗಿದೆ. ಅದನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ. ಆ ಜವಾಬ್ದಾರಿ ತೆಗೆದರೆ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ” ಎಂದು ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ತೆರಳಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಸಚಿವರು ಆಯ್ಕೆಯಾದ ಬಳಿಕ ಅಥವಾ ಸಂಪುಟಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ದೆಹಲಿಗೆ ತೆರಳಿ ಪಕ್ಷದ ಹಿರಿಯರಿಂದ ಸಲಹೆ ಪಡೆಯುವುದು ಸಹಜ ಪ್ರಕ್ರಿಯೆಯಾಗಿದೆ ಎಂದರು.

ಬರ ನಿರ್ವಹಣೆಗೆ ವಿಶೇಷ ಆದ್ಯತೆ:

ಕೃಷಿ ಸಚಿವರ ಸ್ಥಾನವನ್ನು ಶೀಘ್ರದಲ್ಲೇ ಭರ್ತಿ ಮಾಡಲಾಗುವುದು. ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ಯಾವುದೇ ತೊಂದರೆ ಉಂಟಾಗಬಾರದು ಎಂಬ ಉದ್ದೇಶದಿಂದಲೇ ಜಿಲ್ಲಾ ಉಸ್ತುವಾರಿ ಸಚಿವರಿಗೆ ವಿಶೇಷ ಜವಾಬ್ದಾರಿ ನೀಡಲಾಗಿದೆ. ಕಳೆದ ಎರಡು-ಮೂರು ವರ್ಷಗಳಲ್ಲಿ ರೈತರಿಗೆ ಹೆಚ್ಚಿನ ಪ್ರಮಾಣದ ಪರಿಹಾರ ಒದಗಿಸುವಲ್ಲಿ ಸರಕಾರ ಯಶಸ್ವಿಯಾಗಿದೆ ಎಂದು ಅವರು ಹೇಳಿದರು.

ಎಲ್ಲ ವಸತಿ ನಿಲಯಗಳ ಪರಿಶೀಲನೆಗೆ ಸೂಚನೆ:

ಜಿಲ್ಲೆಯ ವಸತಿ ನಿಲಯವೊಂದರಲ್ಲಿ ಕಳಪೆ ಆಹಾರ ಸೇವನೆಯಿಂದ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಹಿನ್ನೆಲೆಯಲ್ಲಿ, ಜಿಲ್ಲೆಯ ಎಲ್ಲ ವಸತಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ವಸತಿ ನಿಲಯಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಆಹಾರ ಪೂರೈಕೆ, ಶುಚಿತ್ವ, ನೈರ್ಮಲ್ಯ ಹಾಗೂ ಅಗತ್ಯ ಮೂಲಸೌಕರ್ಯಗಳ ಬಗ್ಗೆ ಅಧಿಕಾರಿಗಳು ಸಮಗ್ರ ಪರಿಶೀಲನೆ ನಡೆಸಬೇಕು. ಯಾವುದೇ ಲೋಪ ಕಂಡುಬಂದಲ್ಲಿ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News