Chincholi | ಬೊಮ್ಮನಳ್ಳಿಯಲ್ಲಿ ವನಮಹೋತ್ಸವ
ಚಿಂಚೋಳಿ, ಜು.14: ಪರಿಸರ ಸಂರಕ್ಷಣೆ ಹಾಗೂ ಹಸಿರು ವಾತಾವರಣ ನಿರ್ಮಾಣದ ಉದ್ದೇಶದಿಂದ ತಾಲೂಕಿನ ಬೊಮ್ಮನಳ್ಳಿ ಗ್ರಾಮದ ಕಲ್ಲುಗಣಿ ಪ್ರದೇಶದಲ್ಲಿರುವ ಹನುಮಾನ್ ಮಂದಿರದ ಆವರಣದಲ್ಲಿ ಅರಣ್ಯ ಇಲಾಖೆ ಮತ್ತು ಶ್ರೀ ಹನುಮಾನ್ ದೇವಸ್ಥಾನ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ವನಮಹೋತ್ಸವ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.
ಕಾರ್ಯಕ್ರಮಕ್ಕೆ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಅವಿನಾಶ್ ಉಮೇಶ್ ಜಾಧವ್ ಅವರು ಸಸಿ ನೆಡುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಪರಿಸರ ಸಮತೋಲನ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಗಿಡಗಳನ್ನು ನೆಡುವುದಷ್ಟೇ ಸಾಕಾಗುವುದಿಲ್ಲ, ಅವುಗಳನ್ನು ಪೋಷಿಸಿ ಬೆಳೆಸುವ ಸಂಕಲ್ಪವನ್ನೂ ಪ್ರತಿಯೊಬ್ಬರೂ ಮಾಡಬೇಕು ಎಂದು ಕರೆ ನೀಡಿದರು.
ಧಾರ್ಮಿಕ ಕೇಂದ್ರಗಳ ಆವರಣದಲ್ಲಿ ಪರಿಸರ ಸ್ನೇಹಿ ಕಾರ್ಯಕ್ರಮಗಳನ್ನು ಆಯೋಜಿಸುವುದು ಶ್ಲಾಘನೀಯ. ಅರಣ್ಯ ಇಲಾಖೆ ಹಾಗೂ ದೇವಸ್ಥಾನ ಸಮಿತಿಯ ಜಂಟಿ ಪ್ರಯತ್ನ ಸಮಾಜಕ್ಕೆ ಮಾದರಿಯಾಗಿದ್ದು, ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸಲು ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಎಸಿಎಫ್ ಸುನಿಲ್ ಚೌಹಾಣ್, ಆರ್‌ಎಫ್‌ಒ ಜಗನಾಥ್ ಕೇರೋಳಿ, ಡಿಎಫ್‌ಒ ವೀರಭದ್ರಪ್ಪ, ಹಿರಿಯ ಮುಖಂಡ ಕೆ.ಎಂ. ಬಾರಿ, ಅಶೋಕ್ ಮುಖದಂಪುರ್, ವೀರಣ್ಣ ಬಬಲಾದಿ, ವಿರೇಶ್ ಎಂಪಲ್ಲಿ, ಕಾಶೀನಾಥ್ ನಾಟಿಕಾರ್, ಜಗನಾಥ್ ಗುತೆದಾರ, ನಾರಾಯಣ ನಾಟಿಕಾರ್, ರತ್ನಾಕರ್ ಸ್ವಾಮಿ, ಸಂಕೇತ್ ಬಬಲಾದಿ, ಕಿರಣ್, ಲೋಕೇಶ್ ಶಳ್ಳಗಿ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ, ದೇವಸ್ಥಾನ ಸಮಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.