×
Ad

Sedam | ಸಾಮಾಜಿಕ ಭದ್ರತಾ ಮಾಸಾಶನ ಬಾಕಿ ಬಿಡುಗಡೆಗೆ ಕರವೇ ಆಗ್ರಹ

ಒಂದು ವಾರದಲ್ಲಿ ಹಣ ಜಮೆಯಾಗದಿದ್ದರೆ ಉಪವಾಸ ಸತ್ಯಾಗ್ರಹದ ಎಚ್ಚರಿಕೆ

Update: 2026-07-02 17:14 IST

ಸೇಡಂ: ರಾಜ್ಯ ಸರ್ಕಾರದ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಾದ ವೃದ್ಧಾಪ್ಯ ವೇತನ, ವಿಧವಾ ವೇತನ ಹಾಗೂ ಅಂಗವಿಕಲರ ಮಾಸಾಶನ ಕಳೆದ ಹಲವು ತಿಂಗಳುಗಳಿಂದ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮೆಯಾಗದಿರುವ ಹಿನ್ನೆಲೆಯಲ್ಲಿ, ಬಾಕಿ ಇರುವ ಹಣವನ್ನು ತಕ್ಷಣ ಬಿಡುಗಡೆ ಮಾಡುವಂತೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಸೇಡಂ ತಾಲೂಕು ಘಟಕವು ತಾಲೂಕು ದಂಡಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.

ಸಾಮಾಜಿಕ ಭದ್ರತಾ ಯೋಜನೆಗಳನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿರುವ ಸಾವಿರಾರು ವೃದ್ಧರು, ವಿಧವೆಯರು ಹಾಗೂ ಅಂಗವಿಕಲರು ಮಾಸಾಶನ ದೊರೆಯದೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದರಿಂದ ಅನೇಕ ಕುಟುಂಬಗಳ ಜೀವನೋಪಾಯ ಅಸ್ತವ್ಯಸ್ತಗೊಂಡಿದ್ದು, ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಬಾಕಿ ಇರುವ ಮಾಸಾಶನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ರಾಮಚಂದ್ರ ಗುತ್ತೇದಾರ, ತಾಲೂಕಿನ ಎಲ್ಲ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಒಂದು ವಾರದೊಳಗೆ ಬಾಕಿ ಇರುವ ಮಾಸಾಶನ ಜಮಾ ಮಾಡಬೇಕು. ಇಲ್ಲವಾದರೆ ಫಲಾನುಭವಿಗಳನ್ನು ಒಗ್ಗೂಡಿಸಿ ಉಗ್ರ ಸ್ವರೂಪದ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಚಂದ್ರಶೇಖರ ಪೂಜಾರಿ, ಶ್ರೀನಿವಾಸ ರೆಡ್ಡಿ, ದೇವಕುಮಾರ್, ಭೀಮಯ್ಯ ಗುತ್ತೇದಾರ, ಗುಂಡಪ್ಪ, ಪ್ರವೀಣ ಕೊಡ್ಲಾ, ಮಲ್ಲಿಕಾರ್ಜುನ ಬೆಣಕನಹಳ್ಳಿ, ಚಂದ್ರಶೇಖರ ಮಡಿವಾಳ, ಮಹೇಶ್ ರೆಡ್ಡಿ ಜಾಕನಹಳ್ಳಿ, ರವಿ ಸಿಂಗ್, ಮಾಶಪ್ಪ, ಭೀಮಶಂಕರ, ಭಗವಂತ, ಸುಭಾಷ್ ಚಂದ್ರ, ವೆಂಕಟೇಶ್, ಪವನ್ ಕುಲಕರ್ಣಿ, ರಾಜು ಗುತ್ತೇದಾರ, ಕಿರಣಕುಮಾರ್ ಪಾಟೀಲ್, ತಾಯಪ್ಪ ಕೊಡ್ಲಾ, ಹಣಮಂತ ಮುದ್ವಾಳ, ಶರಣಬಸಮ್ಮ, ಈರಮ್ಮ, ಬಸವರಾಜ್, ವಿಠ್ಠಲ್ ಕಲಾಲ್, ಶರಣಯ್ಯ ನಾಮವರ್, ಅಶೋಕ್, ಮಹೆಬೂಬಲಿ ಸೇರಿದಂತೆ ಹಲವರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News