ಸೇಡಂ: ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯ ಕೃಷಿ ಪ್ರತಿನಿಧಿ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಬಸವರಾಜ್ ಆರ್. ಪಾಟೀಲ್ ಊಡಗಿ ಅವರ ನೇತೃತ್ವದಲ್ಲಿ ನಗರದ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ, ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ ಪರ ಮತಯಾಚನೆ ನಡೆಸಲಾಯಿತು.

ನಗರದ ವಿಶ್ವಜ್ಯೋತಿ ಶಾಲೆ, ನೃಪತುಂಗ ಡಿಗ್ರಿ ಕಾಲೇಜು, ಡಿ.ಡಿ.ಯು. ಪಿಯು ಸೈನ್ಸ್ ಕಾಲೇಜು ಹಾಗೂ ಜ್ಞಾನಜ್ಯೋತಿ ಐಟಿಐ ಕಾಲೇಜುಗಳಿಗೆ ಭೇಟಿ ನೀಡಿದ ಮುಖಂಡರು, ಶಿಕ್ಷಕರೊಂದಿಗೆ ಸಂವಾದ ನಡೆಸಿ ಅವರ ವಿವಿಧ ಸಮಸ್ಯೆಗಳು ಹಾಗೂ ಬೇಡಿಕೆಗಳ ಕುರಿತು ಚರ್ಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಶಿಕ್ಷಕರ ಹಳೆಯ ಪಿಂಚಣಿ ಯೋಜನೆ, ವೇತನ ಪರಿಷ್ಕರಣೆ, ವಿವಿಧ ಭತ್ಯೆಗಳು ಸೇರಿದಂತೆ ಶಿಕ್ಷಕರಿಗೆ ಸಂಬಂಧಿಸಿದ ನ್ಯಾಯಸಮ್ಮತ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆದು, ಅವುಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ತಿಳಿಸಿದರು.

ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಹಾಗೂ ಅವರ ಹಿತಾಸಕ್ತಿಗಳನ್ನು ಕಾಪಾಡುವ ನಿಟ್ಟಿನಲ್ಲಿ ಶರಣಪ್ಪ ಮಟ್ಟೂರ ಅವರು ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿ, ಚುನಾವಣೆಯಲ್ಲಿ ಅವರಿಗೆ ಬೆಂಬಲ ನೀಡುವಂತೆ ಶಿಕ್ಷಕರಲ್ಲಿ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶರಣ ರೆಡ್ಡಿಪಾಟೀಲ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಶ್ವನಾಥ್ ಪಾಟೀಲ್ ಬೊಮ್ಮನಳ್ಳಿ, ತಾಲೂಕು ಕೃಷಿ ಪ್ರತಿನಿಧಿಗಳ ಅಧ್ಯಕ್ಷ ಬಸವರಾಜ ರೇವಗೊಂಡ ತೊಟ್ನಳ್ಳಿ, ಯುವ ಕಾಂಗ್ರೆಸ್ ಉಪಾಧ್ಯಕ್ಷ ವಿಲಾಸ್ ಗೌತಮ ನಿಡಗುಂದಾ, ಹಿಂದುಳಿದ ವರ್ಗಗಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಪೂಜಾರಿ, ವಿಜಯಕುಮಾರ ಗುತ್ತೇದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor