×
Ad

Sedam | ವಾರ್ತಾಭಾರತಿ ವರದಿ ಫಲಶ್ರುತಿ : ಮೊರಾರ್ಜಿ ಶಾಲೆ ರಸ್ತೆಯ ಮುಳ್ಳುಕಂಟಿ ತೆರವು

Update: 2026-07-10 17:36 IST

ಸೇಡಂ : ತಾಲೂಕಿನ ಆಡಕಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಎರಡೂ ಬದಿಯಲ್ಲಿ ದಟ್ಟವಾಗಿ ಬೆಳೆದಿದ್ದ ಮುಳ್ಳುಕಂಟಿ ಹಾಗೂ ಗಿಡಗಂಟಿಗಳನ್ನು ಗ್ರಾಮ ಪಂಚಾಯಿತಿ ತೆರವುಗೊಳಿಸಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ.

ಈ ಕುರಿತು ಜುಲೈ 4ರಂದು ವಾರ್ತಾಭಾರತಿಯಲ್ಲಿ ಪ್ರಕಟವಾದ ವರದಿಗೆ ಸ್ಪಂದಿಸಿದ ಆಡಕಿ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಿಯಾಂಕಾ ಗೊಟುರ್ ಅವರ ನೇತೃತ್ವದಲ್ಲಿ ಜುಲೈ 8ರಂದು ಜೆಸಿಬಿ ಯಂತ್ರದ ಮೂಲಕ ಸುಮಾರು ಎರಡು ಕಿಲೋಮೀಟರ್ ಉದ್ದದ ರಸ್ತೆಯ ಎರಡೂ ಬದಿಯ ಮುಳ್ಳುಕಂಟಿ ಮತ್ತು ಗಿಡಗಂಟಿಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿದರು.

ಈ ರಸ್ತೆಯನ್ನು ಪ್ರತಿದಿನ ನೂರಾರು ವಿದ್ಯಾರ್ಥಿಗಳು, ಬೈಕ್ ಸವಾರರು ಹಾಗೂ ಸಾರ್ವಜನಿಕರು ಬಳಸುತ್ತಿದ್ದು, ಗಿಡಗಂಟಿಗಳಿಂದ ರಸ್ತೆ ಇಕ್ಕಟ್ಟಾಗಿ ಅಪಘಾತದ ಆತಂಕ ಎದುರಾಗಿತ್ತು. ಇದೀಗ ತೆರವು ಕಾರ್ಯ ಪೂರ್ಣಗೊಂಡಿರುವುದರಿಂದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿ ಗ್ರಾಮ ಪಂಚಾಯಿತಿಯ ಕ್ರಮವನ್ನು ಮೆಚ್ಚಿದ್ದಾರೆ.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಿಯಾಂಕಾ ಗೊಟುರ್ ಮಾತನಾಡಿ, ವಸತಿ ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವಿದ್ಯುತ್ ಕಂಬ ಹಾಗೂ ಬೀದಿ ದೀಪ ಅಳವಡಿಕೆಗೆ ಸುಮಾರು 2 ಲಕ್ಷ ರೂ. ವೆಚ್ಚವಾಗಲಿದೆ. ಅಗತ್ಯ ಅನುದಾನ ಲಭ್ಯವಾದ ತಕ್ಷಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.

ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಮಲ್ಲಿಕಾರ್ಜುನ ಬಿರಾದಾರ್, ವಾರ್ತಾಭಾರತಿ ವರದಿಗೆ ಸ್ಪಂದಿಸಿ ರಸ್ತೆ ಸ್ವಚ್ಛಗೊಳಿಸಿರುವುದು ಶ್ಲಾಘನೀಯ. ಮುಂದಿನ ಹಂತದಲ್ಲಿ ಬೀದಿ ದೀಪಗಳನ್ನೂ ಅಳವಡಿಸಿದರೆ ವಿದ್ಯಾರ್ಥಿಗಳ ಸುರಕ್ಷಿತ ಸಂಚಾರಕ್ಕೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.

ತೆರವು ಕಾರ್ಯದ ವೇಳೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಿಯಾಂಕಾ ಗೊಟುರ್, ಬಿಲ್ ಕಲೆಕ್ಟರ್ ಶಿವಶರಣಪ್ಪ, ವಿಶ್ವನಾಥ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News