×
Ad

ಕಲಬುರಗಿ | ಸಚಿವ ಖರ್ಗೆ, ಜಿಲ್ಲಾಧಿಕಾರಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಖಂಡಿಸಿ ನಾಳೆ ಪ್ರತಿಭಟನೆ : ಬೆಂಬಲ ವ್ಯಕ್ತಪಡಿಸಿದ ಬೀದಿ ವ್ಯಾಪಾರಿಗಳ ಸಂಘ

Update: 2025-05-30 18:55 IST

ಕಲಬುರಗಿ: ಸಚಿವ ಖರ್ಗೆ ಅವರನ್ನು ನಿಂದಿಸಿದ ಛಲವಾದಿ ನಾರಾಯಣಸ್ವಾಮಿ ಹಾಗೂ ಜಿಲ್ಲಾಧಿಕಾರಿಗಳನ್ನು ಅವಮಾನಿಸಿದ ಎನ್.ರವಿಕುಮಾರ್ ಹೇಳಿಕೆ ಖಂಡಿಸಿ ನಾಳೆ(ಮೇ.31ರಂದು) ನಡೆಯಲಿರುವ ಬೃಹತ್ ಪ್ರತಿಭಟನೆಗೆ ಅಖಿಲ ಕರ್ನಾಟಕ ರಾಜ್ಯ ಬೀದಿ ವ್ಯಾಪಾರಿಗಳ ಸಂಘ ಬೆಂಬಲಿಸುತ್ತದೆ ಎಂದು ಸಂಘದ ರಾಜ್ಯಾಧ್ಯಕ್ಷ ಜಗನ್ನಾಥ್ ಸೂರ್ಯವಂಶಿ ಹೇಳಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜಗನ್ನಾಥ್ ಸೂರ್ಯವಂಶಿ, ಛಲವಾದಿ ನಾರಾಯಣಸ್ವಾಮಿ ಇತ್ತೀಚೆಗೆ ಕಲಬುರಗಿ ನಗರಕ್ಕೆ ಬಂದ ವೇಳೆ ಸುದ್ದಿಗೋಷ್ಠಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ನಾಯಿ ಎಂದು ಕರೆದಿದ್ದಾರೆ. ಓರ್ವ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನಾಗಿ ಸಚಿವರ ವಿರುದ್ಧ ಕೀಳು ಮಟ್ಟದ ಹೇಳಿಕೆ ನೀಡುವುದು ಸರಿಯಲ್ಲ. ಇದನ್ನು ನಾವು ಖಂಡಿಸುತ್ತೇವೆ. ಇದಲ್ಲದೆ ಕಲಬುರಗಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ಜಿಲ್ಲಾಧಿಕಾರಿ ಅವರನ್ನು ಬಿಜೆಪಿ ಎಂಎಲ್‌ಸಿ ಎನ್.ರವಿಕುಮಾರ್ ಅಪಮಾನ ಮಾಡಿರುವುದು ಅಕ್ಷಮ್ಯ ಅಪರಾಧ. ಇಂತಹ ಹೇಳಿಕೆಗಳನ್ನು ಬೀದಿ ವ್ಯಾಪಾರಿಗಳ ಸಂಘ ಖಂಡಿಸುತ್ತದೆ ಎಂದು ಹೇಳಿದರು.  

ಬಿಜೆಪಿಯ ಇಬ್ಬರು ನಾಯಕರು ನೀಡಿರುವ ಅವಹೇಳನಕಾರಿ ಹೇಳಿಕೆ ವಿರುದ್ಧ ದಲಿತಪರ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳ ಆಶ್ರಯದಲ್ಲಿ ಮೇ.31ರಂದು ನಡೆಯುತ್ತಿರುವ ಬೃಹತ್ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸುತ್ತೇವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಗುರುರಾಜ್ ತಿಳಗೋಳ, ಚಂದ್ರಶೇಖರ್ ಪಾಟೀಲ್, ದತ್ತು ಭಾಸಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News