ಸುರಪುರ | ರಾಜಸ್ಥಾನದಲ್ಲಿ ಬಾಲಕಿ ಅತ್ಯಾಚಾರ ಖಂಡಿಸಿ ಪ್ರತಿಭಟನೆ
ಸುರಪುರ : ರಾಜಸ್ಥಾನದಲ್ಲಿ 13 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಸುರಪುರ ಪಟ್ಟಣದ ಮಹಾತ್ಮ ಗಾಂಧಿ ವೃತ್ತದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿ, ಲೈಂಗಿಕ ದೌರ್ಜನ್ಯ ಎಸಗುವವರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಯುವ ಹೋರಾಟಗಾರ ಸೋಮು ಕಟ್ಟಿಮನಿ, ದೇಶದಲ್ಲಿ ಮಹಿಳೆಯರು ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗದ ಕಾರಣ ಇಂತಹ ಘಟನೆಗಳು ಮರುಕಳಿಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಜಸ್ಥಾನದಲ್ಲಿ ನಡೆದಿರುವ ಅಪ್ರಾಪ್ತ ಬಾಲಕಿಯ ಮೇಲಿನ ಸಾಮೂಹಿಕ ಅತ್ಯಾಚಾರ ಮಾನವ ಸಮಾಜವೇ ತಲೆತಗ್ಗಿಸುವಂತಹ ಹೇಯ ಕೃತ್ಯವಾಗಿದೆ. ಇಂತಹ ಪ್ರಕರಣಗಳು ದೇಶದ ವಿವಿಧ ಭಾಗಗಳಲ್ಲಿ ನಿರಂತರವಾಗಿ ನಡೆಯುತ್ತಿದ್ದು, ನ್ಯಾಯಾಲಯಗಳು ತ್ವರಿತ ವಿಚಾರಣೆ ನಡೆಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತಹ ಕಾನೂನು ಜಾರಿಯಾಗಬೇಕು ಎಂದು ಆಗ್ರಹಿಸಿದರು.
ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಶೀಘ್ರ ನ್ಯಾಯ ದೊರೆಯುವಂತೆ ಹಾಗೂ ಕಠಿಣ ಕಾನೂನು ಜಾರಿಗೊಳಿಸುವ ಮೂಲಕ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬೇಕು ಎಂದು ಅವರು ಒತ್ತಾಯಿಸಿದರು.
ಪ್ರತಿಭಟನೆಯ ಬಳಿಕ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಗೆ ಉದ್ದೇಶಿಸಿ ಬರೆದ ಮನವಿಯನ್ನು ತಹಶೀಲ್ದಾರ್ ಮೂಲಕ ಸಲ್ಲಿಸಲಾಯಿತು. ತಹಶೀಲ್ದಾರ್ ಕಚೇರಿಯ ಸಿರಸ್ತೆದಾರರು ಮನವಿ ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಬಸವರಾಜ ಬಡಿಗೇರ, ಚಂದಪ್ಪ ಬಡಿಗೇರ, ಹಣಮಂತರಾಯ ಬಡಿಗೇರ, ಮಲ್ಲಿಕಾರ್ಜುನ ಬಡಿಗೇರ, ಶರಣು ದೇವಪುರ, ಗಣೇಶ ದೇವಿಕೇರಾ, ಬಾಗೇಶ ಬಾದ್ಯಾಪುರ, ತಿಪ್ಪಣ್ಣ ಹೊಸ ಸಿದ್ದಾಪುರ, ಮಾರುತಿ ಚಲವಾದಿ, ಮಂಜುನಾಥ ಝಂಡದಕೇರಾ, ಗಂಗಾಧರ ಕಟ್ಟಿಮನಿ, ಬಸವರಾಜ ಹುನಸೀಹೊಳೆ, ಮಲ್ಲಪ್ಪ ಹೇಮನೂರ, ಹಣಮಂತ ಯಾದಗಿರ ಹೇಮನೂರ, ಚೆನ್ನಪ್ಪ ಹೇಮನೂರ, ನಿಜಪ್ಪ ಹೇಮನೂರ, ಪೀಟರ್ ಸುರಪುರ ಸೇರಿದಂತೆ ಅನೇಕರು ಭಾಗವಹಿಸಿದ್ದರು.