×
Ad

ಸತ್ಯ ಸುದ್ದಿ ಬಿತ್ತರಿಸುವ 'ವಾರ್ತಾ ಭಾರತಿ' ಪತ್ರಿಕೆಯ ಕಾರ್ಯ ಶ್ಲಾಘನೀಯ : ಕೋರಣೇಶ್ವರ ಸ್ವಾಮೀಜಿ

ಕಲ್ಯಾಣ ಕರ್ನಾಟಕ ಆವೃತ್ತಿ ಲೋಕಾರ್ಪಣೆ ಪ್ರಯುಕ್ತ ಕಲಬುರಗಿ ನಗರದಲ್ಲಿ ಓದುಗರು, ಹಿತೈಷಿಗಳ ಸಭೆ

Update: 2025-11-27 20:07 IST

ಕಲಬುರಗಿ: ಸತ್ಯವನ್ನು ಅದು ಹೇಗಿದೆ ಹಾಗೆಯೇ ಪ್ರಕಟಿಸುವ, ಸತ್ಯ ಸುದ್ದಿ ಬಿತ್ತರಿಸುವ 'ವಾರ್ತಾ ಭಾರತಿ' ಪತ್ರಿಕೆಯ ಕಾರ್ಯ ಶ್ಲಾಘನೀಯ ಎಂದು ಆಳಂದ ತೊಂಟದಾರ್ಯ ಅನುಭವ ಮಂಟಪದ ಕೋರಣೇಶ್ವರ ಮಹಾಸ್ವಾಮೀಜಿಗಳು ಹೇಳಿದ್ದಾರೆ.

ವಾರ್ತಾಭಾರತಿ ಕಲಬುರಗಿಯಿಂದ ಕಲ್ಯಾಣ ಕರ್ನಾಟ ಆವೃತ್ತಿ ಬಿಡುಗಡೆಯ ಪ್ರಯುಕ್ತ ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಓದುಗರು, ವೀಕ್ಷಕರು ಹಾಗೂ ಹಿತೈಷಿಗಳ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಕೋರಣೇಶ್ವರ ಮಹಾಸ್ವಾಮೀಜಿ, ಭಾರತದ ಮಾಧ್ಯಮಗಳು ಅತ್ಯಂತ ಕೆಳಮಟ್ಟಕ್ಕೆ ಇಳಿದಿವೆ. ಆಳುವವರ ಆಳಾಗಿ ಆಳುವವರ ಪೂಜೆಯನ್ನು ಮಾಡುತ್ತಿವೆ. ಇಂತಹ ಸ್ಥಿತಿಯಲ್ಲಿ ವಾರ್ತಾ ಭಾರತಿ ಪತ್ರಿಕೆ ಚೆನ್ನಾಗಿ ಮೂಡಿ ಬರುತ್ತಿದೆ, ಕಳೆದ ಹಲವು ವರ್ಷಗಳಿಂದ ನಾನು ವಾರ್ತಾ ಭಾರತಿ ಪತ್ರಿಕೆಯನ್ನು ಓದುತ್ತಿದ್ದೇನೆ ಎಂದು ಹೇಳಿದರು.

ವಾರ್ತಾಭಾರತಿ ಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಮಾತನಾಡಿ, ಬಹುಜನರ ಮಾಧ್ಯಮವಾಗಿ ವಾರ್ತಾಭಾರತಿ ಕೆಲಸ ಮಾಡುತ್ತದೆ. ಪತ್ರಿಕೆಯು ಎಲ್ಲಾ ವರ್ಗದ ವಿಚಾರವಂತ ಬರಹಗಾರರಿಗೆ ಅವಕಾಶ ನೀಡಿದೆ. ಇದು ಶೋಷಿತರ, ಬಡವರನ್ನು ನೀವೇ ಪ್ರಭುಗಳು ಎಂದು ನಿತ್ಯವೂ ಎಚ್ಚರಿಸುವ ಪತ್ರಿಕೆಯಾಗಿದೆ ಎಂದು ಹೇಳಿದರು.

ಅಖಿಲ ಭಾರತ ದಲಿತ ಹಕ್ಕುಗಳ ಅಂದೋಲನದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್‌ ಕುಮಾರ್‌ ರಾಠೋಡ್‌ ಮಾತನಾಡಿ, ಪತ್ರಿಕೆಗಳು ತಮ್ಮ ಪ್ರಮುಖ ಜವಾಬ್ಧಾರಿಯನ್ನೇ ಮರೆತುಬಿಟ್ಟಿವೆ. ಇಂದಿನ ಮಾಧ್ಯಮಗಳು ಶೋಷಿತರ, ದಲಿತರ, ರೈತ, ಕಾರ್ಮಿಕರ ಸಮಸ್ಯೆಗಳನ್ನು ತೋರಿಸಲು ಎಡವಿದೆ ಎಂದು ಹೇಳಿದರು.

ಹೋರಾಟಗಾರ ಮಹಾಂತೇಶ್ ಕೌಲಗಿ ಮಾತನಾಡಿ, ಮಾಧ್ಯಮಗಳು ಒಂದು ಧರ್ಮ, ಒಂದು ಜಾತಿ, ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿರುವಾಗ, ವಾರ್ತಾ ಭಾರತಿ ಅದನ್ನು ಮೆಟ್ಟು ನಿಂತು ಅಂಬೇಡ್ಕರ್ ಅವರ ಜಾತ್ಯತೀತ ಭಾವನೆಯನ್ನು ಸಮಾಜದಲ್ಲಿ ಬಿತ್ತರಿಸುತ್ತಿದೆ ಎಂದು ಹೇಳಿದರು.

ಸಮಾರಂಭದಲ್ಲಿ ದಲಿತ ಮುಖಂಡ ಅರ್ಜುನ್ ಭದ್ರೆ, ಭಾರತ್ ಏಕ್ತಾ ಮಂಚ್ ಉಪಾಧ್ಯಕ್ಷರಾದ ಗುರಮಿತ್ ಸಿಂಗ್ ಸಲುಜಾ, ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ರಮೇಶ್‌ ಲಂಡನಕರ್, ಡಾ. ಮಲ್ಲಿಕಾರ್ಜುನ ಸಾವರ್ಕರ, ಡಿವೈಎಫ್ಐ ಸಂಘಟನೆಯ ರಾಜ್ಯಾಧ್ಯಕ್ಷ ಲವಿತ್ರ ವಸ್ತ್ರದ್ ಸೇರಿದಂತೆ ಹಲವರು ಮಾತನಾಡಿದರು.

ಈ ವೇಳೆ ಸಂತ ಮೇರಿ ಚರ್ಚ್ ಫಾದರ್ ಸ್ಟಾನ್ಸಿಲೋಬೋ, ನಿವೃತ್ತ ತಹಶೀಲ್ದಾರ್‌ ಸೈಯದ್ ನಿಸಾರ್ ಅಹ್ಮದ್ ವಝೀರ್, ಆರೀಫ್ ಅಲಿ‌ ಮನಿಯಾರ್, ಇಕ್ಬಾಲ್ ಅಹ್ಮದ್, ಅಫಜಲ್ ಮೆಹಮೂದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮೇರಾಜುದ್ದೀನ್ ಪಟೇಲ್ ತಾವರಗೇರಾ ನಿರೂಪಿಸಿದರು. ಶಬ್ಬೀರ್ ವಂದಿಸಿದರು.

ಡಿಸೆಂಬರ್‌ 20ರಂದು ಬೆಳಿಗ್ಗೆ 10.30ಕ್ಕೆ ಕಲಬುರಗಿಯ ಎಸ್‌ ಎಂ ಪಂಡಿತ್‌ ರಂಗ ಮಂದಿರದಲ್ಲಿ ವಾರ್ತಾಭಾರತಿ ಕಲ್ಯಾಣ ಕರ್ನಾಟಕ ಆವೃತಿ ಬಿಡುಗಡೆಯಾಗಲಿದೆ.





 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News