×
Ad

ಕೈದಿಗಳ ಜೂಜಾಟದ ವೀಡಿಯೊ ವೈರಲ್ ಪ್ರಕರಣ : ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಡಿಜಿಪಿ ಅಲೋಕ್ ಕುಮಾರ್ ಭೇಟಿ, ಪರಿಶೀಲನೆ

Update: 2026-01-03 17:02 IST

ಕಲಬುರಗಿ: ನಗರದ ಹೊರ ವಲಯದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಅಕ್ರಮವಾಗಿ ಜೂಜಾಟ, ಮದ್ಯ, ಸಿಗರೇಟ್ ಸೇದುವುದು ಸೇರಿದಂತೆ ಹಲವು ಅನೈತಿಕ ಚಟುವಟಿಕೆಗಳ ನಡೆಸುತ್ತಿರುವ ವೀಡಿಯೋ ವೈರಲ್ ಆದ ಬಳಿಕ, ಇಂದು (ಜ.3) ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್ ಅವರು ಭೇಟಿ, ನೀಡಿ ಪರಿಶೀಲನೆ ನಡೆಸಿದ್ದಾರೆ.

ವೈರಲ್ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಲು ವಿಶೇಷ ತನಿಖಾ ಸಂಸ್ಥೆ ರಚಿಸಲಾದ ಬಳಿಕ ಡಿಜಿಪಿ ಅವರ ಈ ಭೇಟಿ ಮಹತ್ವ ಪಡೆದುಕೊಂಡಿದೆ. ಡಿಜಿಪಿ ಅಲೋಕ್ ಕುಮಾರ್ ಅವರು ಜೈಲಿನ ಪ್ರತಿಯೊಂದು ಬ್ಯಾರಕ್‌ಗಳನ್ನು ಕೂಲಂಕಷವಾಗಿ ತಪಾಸಣೆ ನಡೆಸಿ, ಜೈಲಿನೊಳಗೆ ಅಕ್ರಮ ವಸ್ತುಗಳ ಸರಬರಾಜು ಹೇಗೆ ನಡೆಯುತ್ತಿದೆ, ಭದ್ರತಾ ಲೋಪಕ್ಕೆ ಕಾರಣರಾದವರು ಯಾರು ಹಾಗೂ ಕೈದಿಗಳು ಐಷಾರಾಮಿ ಜೀವನ ನಡೆಸಲು ಅವಕಾಶ ಹೇಗೆ ದೊರೆಯುತ್ತಿದೆ ಎಂಬ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು ಎಂದು ತಿಳಿದುಬಂದಿದೆ.

ಈ ಸಂಬಂಧ ಜೈಲು ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ಕೈದಿಗಳನ್ನು ವಿಚಾರಣೆ ನಡೆಸಿದ ಡಿಜಿಪಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಸಂದರ್ಭದಲ್ಲಿ ಕಾರಾಗೃಹ ಇಲಾಖೆ ಹೆಚ್ಚುವರಿ ಮಹಾನಿರೀಕ್ಷಕ ಪಿ.ವಿ. ಆನಂದ ರೆಡ್ಡಿ, ಉತ್ತರ ವಲಯ ಡಿಐಜಿ ಪಿ. ಶೇಷಾ, ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ, ಜೈಲು ಅಧೀಕ್ಷಕಿ ಡಾ. ಅನಿತಾ ಸೇರಿದಂತೆ ಹಲವಾರು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾರಾಗೃಹಕ್ಕೆ ಭೇಟಿ ನೀಡುವ ಮೊದಲು ಡಿಜಿಪಿ ಅಲೋಕ್ ಕುಮಾರ್ ಅವರು ಪೊಲೀಸ್ ಇಲಾಖೆಯಿಂದ ಗೌರವ ವಂದನೆ ಸ್ವೀಕರಿಸಿ, ಬಳಿಕ ತಪಾಸಣೆ ಕೋಣೆಗೆ ಭೇಟಿ ನೀಡಿ ಜೈಲಿನೊಳಗೆ ಪ್ರವೇಶಿಸಿದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News