ಕಾಞಂಗಾಡ್: ಲಂಚ ಸ್ವೀಕರಿಸುತ್ತಿದ್ದ ವೇಳೆ ಕೆಎಸ್ಇಬಿ ಸಬ್ ಎಂಜಿನಿಯರ್ ಬಂಧನ
Update: 2025-08-23 11:39 IST
ಕಾಸರಗೋಡು: ಲಂಚ ಸ್ವೀಕರಿಸುತ್ತಿದ್ದ ವೇಳೆ ಕೆಎಸ್ಇಬಿ ಸಬ್ ಇಂಜಿನಿಯರನ್ನು ವಿಜಿಲೆನ್ಸ್ ದಳ ಬಂಧಿಸಿದ ಘಟನೆ ಜಿಲ್ಲೆಯ ಕಾಞಂಗಾಡ್‌ನಲ್ಲಿ ಶುಕ್ರವಾರ ಸಂಜೆ ನಡೆದಿದೆ.
ವಿದ್ಯುನ್ಮಂಡಳಿಯ ಚಿತ್ತಾರಿ ಉಪ ಕಚೇರಿಯಲ್ಲಿ ಸಬ್ ಇಂಜಿನಿಯರ್ ಹುದ್ದೆಯಲ್ಲಿದ್ದ ಕಾಞಂಗಾಡ್ ಕಾರಾಟ್ ವಯಲ್ ನಿವಾಸಿ ಕೆ.ಸುರೇಂದ್ರನ್( 55) ಬಂಧಿತ ವ್ಯಕ್ತಿ.
ಪೂಚಕ್ಕಾಡ್ ನಿವಾಸಿಯೊಬ್ಬರ ನೂತನ ಮನೆ ನಿರ್ಮಾಣಕ್ಕೆ ನೀಡಲಾಗಿದ್ದ ತಾತ್ಕಾಲಿಕ ವಿದ್ಯುತ್ ಸಂಪರ್ಕವನ್ನು ಖಾಯಂಗೊಳಿಸಲು ಮೂರು ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಕಾಸರಗೋಡು ವಿಜಿಲೆನ್ಸ್ ದಳ ದಾಳಿ ನಡೆಸಿದೆ.
ವಿಜಿಲೆನ್ಸ್ ಡಿವೈಎಸ್ಪಿ ವಿ.ಉಣ್ಣಿಕೃಷ್ಣನ್ ಮತ್ತು ತಂಡದ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.
ಬಂಧಿತರನ್ನು ಇಂದು ತಲಶ್ಶೇರಿ ವಿಜಿಲೆನ್ಸ್ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದೆಂದು ವಿಜಿಲೆನ್ಸ್ ಅಧಿಕಾರಿಗಳು ತಿಳಿಸಿದ್ದಾರೆ.