×
Ad

ಕಾಸರಗೋಡು: ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಕಟ್ಟಡದ ಮಾಲಕ ಮೃತ್ಯು

Update: 2025-08-07 18:03 IST

ಕಾಸರಗೋಡು: ನಿರ್ಮಾಣ ಹಂತದ ಕಟ್ಟಡದ ಮೂರನೇ ಮಹಡಿಯಿಂದ ಬಿದ್ದು ಕಟ್ಟಡ ಮಾಲಕ ಮೃತಪಟ್ಟ ಘಟನೆ ಮಾವುಂಗಾಲ್ ನಲ್ಲಿ ನಡೆದಿದೆ.

ಗುತ್ತಿಗೆದಾರನು ಇವರನ್ನು ಕೆಳಗೆ ದೂಡಿ ಹಾಕಿದ್ದಾಗಿ ಎಂದು ಆರೋಪಿಸಲಾಗಿದೆ. ವೆಳ್ಳಿಕೋತ್ ಪೇರಲದ ರಾಯ್ ಜೋಸೆಫ್ ( 48) ಮೃತಪಟ್ಟವರು.

ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಗುರುವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಅವರು ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಉದ್ಯಮ ನಡೆಸುತ್ತಿದ್ದರು. ಆಗಸ್ಟ್ ಮೂರರಂದು ಮಧ್ಯಾಹ್ನ ಈ ಘಟನೆ ನಡೆದಿತ್ತು.

ರಾಯ್ ಜೋಸೆಫ್ ಮತ್ತು ಗುತ್ತಿಗೆದಾರ ನಡುವೆ ಕೆಲಸದ ಬಗ್ಗೆ ವಾಗ್ವಾದ ನಡೆದಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಮಾತು ವಿಕೋಪಕ್ಕೆ ತಿರುಗಿ ರಾಯ್ ಜೋಸೆಫ್ ರನ್ನು ಗುತ್ತಿಗೆದಾರ ಮೂರನೇ ಮಹಡಿಯಿಂದ ತಳ್ಳಿ ಹಾಕಿರುವುದಾಗಿ ದೂರಲಾಗಿದೆ.

ಜೋಸೆಫ್ ಅವರ ಪತ್ನಿ ಮತ್ತು ಇತರರು ಪೊಲೀಸರಿಗೆ ನೀಡಿದ ಮಾಹಿತಿಯಂತೆ ರಾಯ್ ಮತ್ತು ಗುತ್ತಿಗೆದಾರ ಪುಲ್ಲೂರಿನ ನರೇಂದ್ರ ನಡುವೆ ಜಗಳ ನಡೆದಿತ್ತು. ನರೇಂದ್ರ ತನ್ನನ್ನು ಕಟ್ಟಡದಿಂದ ತಳ್ಳಿದ್ದಾನೆ ಎಂದು ರಾಯ್ ತನ್ನ ಪತ್ನಿ ಮತ್ತು ಇತರರಿಗೆ ತಿಳಿಸಿದ್ದ ಎನ್ನಲಾಗಿದೆ. ಆರಂಭದಲ್ಲಿ ಅವರನ್ನು ಮಾವುಂಗಾಲ್ ನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ  ಮಂಗಳೂರಿಗೆ ಸ್ಥಳಾಂತರಿಸಲಾಯಿತು.

ಘಟನೆಯ ನಂತರ ಹೊಸದುರ್ಗ ಪೊಲೀಸರು ನರೇಂದ್ರ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿ ಈತನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News