ಕುಂಬಳೆ : ಡಿವೈಎಫ್ಐ ನಾಯಕಿ ಆತ್ಮಹತ್ಯೆ
ಕಾಸರಗೋಡು: ಡಿವೈಎಫ್ಐ ನಾಯಕಿ, ಯುವ ನ್ಯಾಯವಾದಿಯೋರ್ವರು ಕಚೇರಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಸಂಜೆ ಬೆಳಕಿಗೆ ಬಂದಿದೆ.
ಕುಂಬಳೆ ಬತ್ತೇರಿಯ ರಂಜಿತಾ ಕುಮಾರಿ (30) ಆತ್ಮಹತ್ಯೆ ಮಾಡಿಕೊಂಡವರು. ಕಛೇರಿಯ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಂಗಳವಾರ ಸಂಜೆಯಿಂದ ರಂಜಿತಾ ಮನೆಯವರು ಮೊಬೈಲ್‌ಗೆ ಹಲವು ಕರೆ ಮಾಡಿದ್ದರು. ಕರೆ ಸ್ವೀಕರಿಸದ ಹಿನ್ನಲೆಯಲ್ಲಿ ಕಚೇರಿಗೆ ಬಂದಾಗ ಒಳಗಿನಿಂದ ಬಾಗಿಲು ಚಿಲಕ ಹಾಕಿದ ಸ್ಥಿತಿಯಲ್ಲಿತ್ತು. ಪೊಲೀಸರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಮುರಿದು ನೋಡಿದಾಗ ಫ್ಯಾನ್ ಗೆ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ರಂಜಿತಾ ಅವರು ಕುಂಬಳೆಯ ಡಿವೈಎಫ್ಐ ಪ್ರಮುಖ ನಾಯಕಿ, ಮಹಿಳಾ ಅಸೋಸಿಯೇಷನ್ ಏರಿಯಾ ಸಮಿತಿ ಅಧ್ಯಕ್ಷೆಯಾಗಿದ್ದರು. ಡಿವೈಎಫ್ಐ ಬ್ಲಾಕ್ ಘಟಕ ಕೋಶಾಧಿಕಾರಿ ಮತ್ತು ವನಿತಾ ಸೇವಾ ಸಹಕಾರಿ ಸಂಘದ ಅಧ್ಯಕ್ಷೆಯಾಗಿದ್ದ ಅವರು ಕುಂಬಳೆ ಪ್ರದೇಶದಿಂದ ಸಿಪಿಐ ಎಂ ನ ಸಮರ್ಥ ನಾಯಕಿಯಾಗಿದ್ದರು. ಕುಂಬಳೆಯ ಖಾಸಗಿ ಕಟ್ಟಡದಲ್ಲಿನ ಕಚೇರಿಯಲ್ಲಿ ಇವರ ಕಚೇರಿ ಕಾರ್ಯ ನಿರ್ವಹಿಸುತ್ತಿತ್ತು.
ಮೃತದೇಹದ ಬಳಿಯಿಂದ ಚೀಟಿ ದೊರೆತಿದ್ದು, ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇವರ ಸಹೋದರ ಸಕ್ರಿಯ ಸಿಪಿಐ ಎಂ ಕಾರ್ಯಕರ್ತ, ರಿಕ್ಷಾ ಚಾಲಕ ಅಜಿತ್ ನಾಲ್ಕೈದು ವರ್ಷದ ಹಿಂದೆ ದುರಂತದಲ್ಲಿ ಮೃತಪಟ್ಟಿದ್ದರು. ಮೃತ ರಂಜಿತಾ ಪತಿ ಮತ್ತು ಮಗುವನ್ನು ಅಗಲಿದ್ದಾರೆ.
ಕುಂಬಳೆ ಪೊಲೀಸರು ಮಹಜರು ನಡೆಸಿದರು. ಮೃತದೇಹ ಕುಂಬಳೆ ಸೇವಾ ಸಹಕಾರಿ ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದೆ