ಕುಂಬಳೆ : ಬಾವಿಗೆ ಬಿದ್ದು ಯುವಕ ಮೃತ್ಯು
ಕಾಸರಗೋಡು: ಯುವಕನೋರ್ವ ಬಾವಿಗೆ ಬಿದ್ದು ಮೃತಪಟ್ಟ ಘಟನೆ ರವಿವಾರ ರಾತ್ರಿ 9ಗಂಟೆ ಸುಮಾರಿಗೆ ಕುಂಬಳೆ ಸಮೀಪದ ನಾರಾಯಣಮಂಗಲ ಎಂಬಲ್ಲಿ ನಡೆದಿದೆ.
ನಾರಾಯಣ ಮಂಗಲದ ವಿವೇಕ್ ಶೆಟ್ಟಿ (28) ಮೃತಪಟ್ಟವರು. ಇವರನ್ನು ರಕ್ಷಿಸಲು ಬಾವಿಗೆ ಹಾರಿದ ಸಹೋದರನನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದರು.
ವಿವೇಕ್ ಬಾವಿಗೆ ಬೀಳುತ್ತಿರುವುದನ್ನು ಗಮನಿಸಿದ ಸಹೋದರ ತೇಜಸ್ ಬಾವಿಗೆ ಹಾರಿದ್ದು, ಬಾವಿಯಲ್ಲಿ ಸಿಲುಕಿಕೊಂಡ ಇಬ್ಬರನ್ನು ಸ್ಥಳೀಯರು ಹಾಗೂ ಮನೆಯವರು ಮೇಲಕ್ಕೆ ತರಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಮಾಹಿತಿ ತಿಳಿದು ಉಪ್ಪಳ ದಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಇಬ್ಬರನ್ನು ಇಬ್ಬರನ್ನು ಮೇಲಕ್ಕೆತ್ತಿದ್ದು, ವಿವೇಕ್ ನನ್ನು ಕುಂಬಳೆಯ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ ಎಂದು ತಿಳಿದು ಬಂದಿದೆ.
ಮೃತದೇಹ ವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರ ದಲ್ಲಿರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟುಕೊಡಲಾಗುತ್ತದೆ.
ವಿವೇಕ್ ಅವರು ಕಾಸರಗೋಡು ಲೀಗಲ್ ಮೆಟ್ರಾಲಜಿ ಇಲಾಖೆಯ ಸೀನಿಯರ್ ಕ್ಲರ್ಕ್ ಹುದ್ದೆಯಲ್ಲಿದ್ದರು. ನಾಲ್ಕು ವರ್ಷಗಳ ಹಿಂದೆ ಆಶ್ರಿತ ನಿಯಮಾನುಸಾರ ಇವರಿಗೆ ಸರಕಾರಿ ಉದ್ಯೋಗ ದೊರೆತಿತ್ತು. ಕೆಲ ಸಮಯದಿಂದ ಉದ್ಯೋಗಕ್ಕೆ ತೆರಳುತ್ತಿದ್ದರು.