×
Ad

ಮಂಜೇಶ್ವರ: ಕಣ್ವ ತೀರ್ಥ ನಾಗರಿಕ ಕ್ರಿಯಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನಾ ಜಾಥಾ, ಧರಣಿ ಸತ್ಯಾಗ್ರಹ

ಮೀನು ಸಂಸ್ಕರಣಾ ಘಟಕದಿಂದ ಪರಿಸರ ಮಾಲಿನ್ಯ: ಆರೋಪ

Update: 2025-09-16 12:06 IST

ಮಂಜೇಶ್ವರ : ಮೀನು ಸಂಸ್ಕರಣಾ ಘಟಕದ ಮಾಲಿನ್ಯದಿಂದ ಉಂಟಾಗಿರುವ ಗಂಭೀರ ಸಮಸ್ಯೆಗಳನ್ನು ಪ್ರತಿಭಟಿಸಿ ಮಂಜೇಶ್ವರ ಕಣ್ವ ತೀರ್ಥ ನಾಗರಿಕ ಕ್ರಿಯಾ ಸಮಿತಿ ನೇತೃತ್ವದಲ್ಲಿ ಸೋಮವಾರ ಮಂಜೇಶ್ವರ ಗ್ರಾಮ ಪಂಚಾಯತ್ ಕಚೇರಿಗೆ ಪ್ರತಿಭಟನಾ ಜಾಥಾ ಹಾಗೂ ಧರಣಿ ಸತ್ಯಾಗ್ರಹ ನಡೆಯಿತು.

ಕೆಲ ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಈ ಘಟಕದಿಂದ ಪರಿಸರದಲ್ಲಿ ಬದುಕು ನರಕಮಯವಾಗಿದ್ದು, ಈ ಹಿನ್ನೆಲೆಯ ಲ್ಲಿ ಪ್ರತಿಭಟನೆ ನಡೆಯಿತು.

ಕಣ್ವತೀರ್ಥ ರೈಲ್ವೆ ಗೇಟ್ ಪರಿಸರದಿಂದ ಹೊರಟ ಪ್ರತಿಭಟನಾ ಮೆರವಣಿಗೆಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು. ಬಳಿಕ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಧರಣಿಯನ್ನು ಕಮಾಂಡರ್ ವಿಜಯಕುಮಾರ್ ಉದ್ಘಾಟಿಸಿದರು.

ಮಧುಸೂಧನ ಆಚಾರ್ಯ, ಸುಭಾಶ್ಚಂದ್ರ ಕಣ್ವತೀರ್ಥ, ಸುನಿಲ್ ಡಿ ಸೋಜ, ಉರ್ಬನ್ ಡಿ ಸೋಜ, ವಿನಯಾ ಭಾಸ್ಕರ್, ಲಕ್ಷ್ಮಣ ಕುಚ್ಚಿಕ್ಕಾಡ್, ಹರೀಶ ಮಾಡ, ಮೊಹ್ಮದ್ ಇಬ್ರಾಹಿಂ, ಮೊಯ್ದೀನ್, ಅಶ್ರಫ್ ಬಡಾಜೆ, ಜಯಂತ ಕುಮಾರ್, ಸುಕುಮಾರ್, ಪಾವನ, ಡೆನಿಸ್ಟ್ ಮೊಂತೇರೋ, ಹರೀಶ ಮಜಲು, ಬಾಲಕೃಷ್ಣ ಮೊದಲಾದವರು ಪಂಚಾಯತ್ ಜಾಥಾ ಕ್ಕೆ ನೇತೃತ್ವ ನೀಡಿದರು.

ಪರಿಸರ ಮಾಲಿನ್ಯದಿಂದ ನೂರಾರು ನಾಗರಿಕರ ಬದುಕು ಅಸಹನೀಯವಾಗಿದ್ದರೂ ಗ್ರಾಮ ಪಂಚಾಯತ್ ಆಡಳಿತ ಹಾಗೂ ಅಧಿಕಾರಿಗಳು ಮೌನ ವಹಿಸಿದ್ದು, ಈ ಬಗ್ಗೆ ಆಕ್ರೋಶ ವ್ಯಕ್ತವಾಯಿತು. ಧರಣಿಯನ್ನುದ್ದೇಶಿಸಿ ಮಾತನಾಡಿದಸುಭಾಶ್ಚಂದ್ರ ಕಣ್ವತೀರ್ಥ ರವರು ನಾಗರೀಕರು ಪಡುತ್ತಿರುವ ಅಸಹನೀಯ ಬವಣೆ ಇಂದು ನಿನ್ನೆಯದಲ್ಲ. ಆದರೆ ಪಂಚಾಯತ್ ಸಹಿತ ಅಧಿಕಾರಿಗಳು ಈ ಸಂಬಂಧ ಮೌನ ವಹಿಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಇದು ಸೂಚನಾ ಸತ್ಯಾಗ್ರಹವಾಗಿದ್ದು, ಕಣ್ವತೀರ್ಥ ನಾಗರಿಕ ನಿರಂತರ ಹೋರಾಟ ಮುಂದೆ ತೀವ್ರ ಸ್ವರೂಪ ಪಡೆದು ಕಾನೂನು ಕ್ರಮದ ಮೊರೆ ಹೋಗುವುದಾಗಿ ಮುನ್ನೆಚ್ಚರಿಕೆ ನೀಡಿದರು.

ಚಂದ್ರಹಾಸ ಕಣ್ವತೀರ್ಥ ಸಭೆ ನಿಯಂತ್ರಿಸಿದರು. ಪ್ರವೀಣ್ ಕಣ್ವತೀರ್ಥ ಸ್ವಾಗತಿಸಿ, ಪ್ರದೀಪ್ ಕುಮಾರ್ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News