ಕಾಸರಗೋಡು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಟೋಲ್ ಗೇಟ್‌ನಲ್ಲಿ ನ.12ರಿಂದ ಶುಲ್ಕ ವಸೂಲಿ
ಕಾಸರಗೋಡು : ನಾಗರಿಕರ ಪ್ರತಿಭಟನೆ, ಹೋರಾಟ ಹಾಗೂ ಕಾನೂನು ಹೋರಾಟಗಳ ಮಧ್ಯೆಯೇ ಕಾಸರಗೋಡು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಆರಿಕ್ಕಾಡಿ ಟೋಲ್ ಪ್ಲಾಜಾದಲ್ಲಿ ನಾಳೆ (ಬುಧವಾರ) ಬೆಳಿಗ್ಗೆ 8 ಗಂಟೆಯಿಂದ ಶುಲ್ಕ ವಸೂಲಿ ಆರಂಭಗೊಳ್ಳಲಿದೆ. ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈಗಾಗಲೇ ಘೋಷಣೆ ಮಾಡಿದ್ದು, ಜಾಹೀರಾತು ನೀಡಿದೆ. ರಾಷ್ಟ್ರೀಯ ಹೆದ್ದಾರಿ ಇಲಾಖೆ ಪ್ರಕಟಿಸಿದ ಅಧಿಸೂಚನೆಯಂತೆ ನ.12ರಂದು ಬೆಳಿಗ್ಗೆ 8ರಿಂದ ಟೋಲ್ ಶುಲ್ಕ ವಸೂಲಿ ಮಾಡಲಿದೆ.
ಇದರಂತೆ ಕಾರು, ಜೀಪು, ವ್ಯಾನ್ ಸಹಿತ ಲಘುವಾಹನಗಳ ಏಕ ಮುಖಿ ಸಂಚಾರಕ್ಕೆ ನಾಳೆಯಿಂದ 85ರೂ. ಶುಲ್ಕ ಪಾವತಿಸಬೇಕು. ಮಿನಿ ಬಸ್ ಸಹಿತ ಇತರ ವಾಹನಗಳಿಗೆ ಸಂಚಾರಕ್ಕೆ 140ರೂ., ಬಸ್, ಟ್ರಕ್ ಸಹಿತ ಘನ ವಾಹನಕ್ಕೆ 290 ರೂ. ಮತ್ತು ವಾಣಿಜ್ಯ ವಾಹನಗಳಿಗೆ 320ರೂ. ಶುಲ್ಕ ಸೇರಿದಂತೆ ವಿವಿಧ ಕೆಟಗರಿ ನೀಡಲಾಗಿದೆ.
ಟೋಲ್ ಪ್ಲಾಜಾ ಸುತ್ತಲಿನ 20 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವವರ ವಾಣಿಜ್ಯೇತರ ವಾಹನಗಳಿಗೆ ಪ್ರತಿ ತಿಂಗಳು 340 ರೂ. ಶುಲ್ಕ ನಿಗಧಿಗೊಳಿಸಿದೆ.
ಟೋಲ್ ಪ್ಲಾಝ ವಿರೋಧಿಸಿ ನಾಗರಿಕ ಕ್ರಿಯಾ ಸಮಿತಿ ನೀಡಿದ ಹೈಕೋರ್ಟು ದೂರಿನ ತೀರ್ಪು ನಾಳೆ ( ಬುಧವಾರ) ಪ್ರಕಟವಾಗಲಿದೆ. ಇದೇ ವೇಳೆ ಹೆದ್ದಾರಿ ಇಲಾಖೆ ಶುಲ್ಕ ಸಂಗ್ರಹಕ್ಕೆ ಮುಂದಾಗಿದೆ.