ವಿರಾಜಪೇಟೆ : ಸದ್ಭಾವನಾ ಮಂಚ್ ನಿಂದ ಸೌಹಾರ್ದ ಸಂಗಮ ಕಾರ್ಯಕ್ರಮ
ವಿರಾಜಪೇಟೆ: ಧರ್ಮಗಳು ಮೂಲಭೂತವಾಗಿ ಜಗತ್ತಿನ ಸೃಷ್ಟಿಕರ್ತ ಒಬ್ಬನೇ ಎಂಬ ಸತ್ಯವನ್ನು ಬೋಧಿಸುತ್ತವೆ. ಕುರ್ ಆನಿನ ಬೋಧನೆಯಂತೆ ಪ್ರಪಂಚದಲ್ಲಿರುವ ಎಲ್ಲಾ ಮನುಷ್ಯರೂ ಒಂದೇ ತಂದೆ ತಾಯಿಯ ಮಕ್ಕಳು' ಎಂದು ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಜತೆ ಕಾರ್ಯದರ್ಶಿ ರಿಯಾಝ್ ಅಹ್ಮದ್ ಹೇಳಿದ್ದಾರೆ.
ಅವರು ವಿರಾಜಪೇಟೆಯಲ್ಲಿ ಸದ್ಭಾವನಾ ಮಂಚ್ ಏರ್ಪಡಿಸಿದ್ದ 'ಸೌಹಾರ್ದ ಸಂಗಮ'ದಲ್ಲಿ ದಿಕ್ಕೂಚಿ ಭಾಷಣ ಮಾಡಿದರು.
'ಧರ್ಮಗಳ ಹೆಸರಿನಲ್ಲಿ ಮನುಷ್ಯನು ಕಟ್ಟಿಕೊಂಡಿರುವ ಗೋಡೆಗಳನ್ನು ಸೌಹಾರ್ದದ ಮೂಲಕ ಕೆಡವಿ ಹಾಕಬೇಕಾಗಿದೆ. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಸಮಾಜದಲ್ಲಿ ರಾಜಕೀಯ ಲಾಭಕ್ಕಾಗಿ ಜಾತಿ, ವರ್ಣ, ಧರ್ಮಗಳ ಹೆಸರಿನಲ್ಲಿ ಒಡಕು ಉಂಟು ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸಮಾಜದ ನೈತಿಕ ಮೌಲ್ಯಗಳ ಅಧಃಪತನ ಇಂದು ನಾವು ಎದುರಿಸುತ್ತಿರುವ ದೊಡ್ಡ ಸಮಸ್ಯೆಯಾಗಿದೆ. ಮಾನವ ಸಮಾಜವು ಆಧುನಿಕತೆಯ ಭರಾಟೆಯಲ್ಲಿ ಧರ್ಮದಿಂದ ದೂರವಾಗಿರುವುದೇ ಇದಕ್ಕೆ ಕಾರಣ. ಎಲ್ಲಾ ಸಮಸ್ಯೆಗಳಿಗೆ ಧರ್ಮವೇ ಕಾರಣ ಎಂಬುದು ತಪ್ಪು ಕಲ್ಪನೆಯಾಗಿದೆ. ನೈಜ ಸೃಷ್ಟಿಕರ್ತನಲ್ಲಿ ವಿಶ್ವಾಸವಿಟ್ಟು ಅವನ ಆದೇಶದಂತೆ ಸಂಪೂರ್ಣ ಜೀವನವನ್ನು ದೇವನ ಅನುಸರಣೆಯಂತೆ ಸಾಗಿಸುವುದು ಇಂದಿನ ಅಗತ್ಯ” ಎಂದರು.
ಸೌಹಾರ್ದ ಸಂಗಮವನ್ನು ಉದ್ಘಾಟಿಸಿದ ಅರಮೇರಿ ಶ್ರೀ ಕಳಂಚೇರಿ ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, 'ಹಬ್ಬಗಳು ಧಾರ್ಮಿಕ ಹಿನ್ನೆಲೆಯಲ್ಲಿಯೇ ಆಚರಿಸಿಕೊಂಡು ಬರುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಹಬ್ಬಗಳ ಪಾವಿತ್ರ್ಯತೆಗೆ ಕುಂದು ಉಂಟಾಗುವ ಕೆಲಸಗಳು ನಡೆಯುತ್ತಿರುವುದು ವಿಷಾದನೀಯ. ಧರ್ಮಗಳ ಮೂಲ ವಿಶ್ವಾಗಳಲ್ಲಿರುವ ಭಿನ್ನತೆಗಳನ್ನು ಬದಿಗಿರಿಸಿ ಹಬ್ಬಗಳನ್ನು ಒಟ್ಟುಗೂಡಿ ಆಚರಿಸುವಂತಾಗಬೇಕು' ಎಂದು ಹೇಳಿದರು. ಹೊಣೆಗಾರಿಕೆಯರಿಯದ ಉತ್ತರದಾಯಿತ್ವವಿಲ್ಲದ ಸಮಾಜದಿಂದ ಆರಾಜಕತೆ ಉಂಟಾಗುತ್ತವೆ. ಮನುಷ್ಯನಿಗೆ ಹೊಣೆಗಾರಿಕೆಯ ಅರಿವು ಮೂಡಿಸುವುದು ಮತ್ತು ಅವನನ್ನು ಸರಿದಾರಿಗೆ ತರುವಂತಹ ಕೆಲಸ ಧರ್ಮಗಳು ನಿರ್ವಹಿಸುತ್ತವೆ. ಧಾರ್ಮಿಕ ವಿಶ್ವಾಸ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಾಗಿದೆ" ಎಂದು ಅವರು ಹೇಳಿದರು.
ನಿವೃತ್ತ ಪ್ರಾಂಶುಪಾಲ ಪ್ರೊ.ಪಟ್ಟಡ ಪೂವಣ್ಣ ಮಾತನಾಡಿ, 'ಸಾಮಾಜಿಕ ಪಿಡುಗುಗಳಾದ ವರದಕ್ಷಿಣೆ, ಭ್ರಷ್ಟಾಚಾರ, ಹೆಣ್ಣು ಭ್ರೂಣಹತ್ಯೆ, ಮದ್ಯಪಾನ, ತಂಬಾಕು ಸೇವನೆ, ಅಸ್ಪೃಶ್ಯತೆ ಇವುಗಳ ಬಗ್ಗೆ ಎಲ್ಲಾ ಧರ್ಮೀಯರು ಒಟ್ಟು ಸೇರಿ ಜನಾಭಿಪ್ರಾಯ ರೂಪಿಸಬೇಕು. ಸರ್ವಧರ್ಮೀಯರೂ ವೈಚಾರಿಕ ಮನೋಭಾವದೊಂದಿಗೆ ಜೊತೆಗೂಡಿ ಜೀವನದ ವಿವಿಧ ಕ್ಷೇತ್ರಗಳಲ್ಲಿ ಮೌಲ್ಯಗಳನ್ನು ಪುನಃಸ್ಥಾಪಿಸಬೇಕಾಗಿದೆ." ಎಂದರು.
ಸಂತ ಅನ್ನಮ್ಮ ಶಿಕ್ಷಣ ಸಂಸ್ಥೆಗಳ ಪ್ರಧಾನ ವ್ಯವಸ್ಥಾಪಕ ರೆ.ಫಾ.ಮದಲೈಮುತ್ತು, ವಿರಾಜಪೇಟೆ ಪುರಸಭಾ ಅಧ್ಯಕ್ಷ ಎಂ.ಕೆ.ದೇಚಮ್ಮ, ವಕೀಲರ ಸಂಘದ ಅಧ್ಯಕ್ಷ ಸಿ.ಕೆ.ಪೂವಣ್ಣ ಮಾತನಾಡಿದರು.
ಈ ಸಂದರ್ಭದಲ್ಲಿ ಕೊಡವ ಸಮಾಜದ ನೂತನ ಅಧ್ಯಕ್ಷರೂ ಸದ್ಭಾವನಾ ಮಂಚ್ ಕಾರ್ಯಾಧ್ಯಕ್ಷರೂ ಆದ ಅಮ್ಮುಣಿಚಂಡ ರವಿ ಉತ್ತಪ್ಪರನ್ನು ಸನ್ಮಾನಿಸಲಾಯಿತು. ಸದ್ಭಾವನಾ ಮಂಚ್ ಸ್ಥಾನೀಯ ಅಧ್ಯಕ್ಷ ಡಾ.ಎಂ.ಸಿ.ಕಾರ್ಯಪ್ಪ ಅಧ್ಯಕ್ಷತೆ ವಹಿಸಿದ್ದರು.
ಸದಸ್ಯರಾದ ಕೆ.ಪಿ.ಕುಂಞಿ ಮುಹಮ್ಮದ್, ಪುಷ್ಪರಾಜ್ ಜೈನ್, ಚೋಪಿ ಜೋಸೆಫ್, ಕೆ.ಪಿ.ರಶೀದ್ ವೇದಿಕೆಯಲ್ಲಿದ್ದರು.
ಕಾರ್ಯದರ್ಶಿ ಪಿ.ಕೆ.ಅಬ್ದುಲ್ ರಹ್ಮಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಕ್ಷೇಪ್ ಚೈನ್ ವಂದಿಸಿದರು.