×
Ad

ಹೇಮಾವತಿ ನದಿ ಹಿನ್ನೀರಿನಲ್ಲಿ ಮೀನು ಹಿಡಿಯಲು ತೆರಳಿ ನಾಪತ್ತೆಯಾಗಿದ್ದ ಇಬ್ಬರ ಮೃತದೇಹ ಪತ್ತೆ

Update: 2026-07-12 22:12 IST

ಮಡಿಕೇರಿ : ಕೊಡ್ಲಿಪೇಟೆ ಸಮೀಪದ ಜನಾರ್ಧನ ಹಳ್ಳಿಯ ಹೇಮಾವತಿ ನದಿಯ ಹಿನ್ನೀರಿನಲ್ಲಿ ಮೀನು ಹಿಡಿಯಲು ತೆರಳಿ ಬಳಿಕ ನಾಪತ್ತೆಯಾಗಿದ್ದ ನೀರುಗುಂದ ಗ್ರಾಮದ ನಿವಾಸಿಗಳಾದ ನಾಗರಾಜ್(45) ಹಾಗೂ ಶಿವರಾಜ್(50) ಅವರ ಮೃತದೇಹ ರವಿವಾರ ಮಧ್ಯಾಹ್ನ ಪತ್ತೆಯಾಗಿದೆ.

ಎನ್ ಡಿ ಆರ್ ಎಫ್ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸಿ ಇಬ್ಬರ ಮೃತದೇಹಗಳನ್ನು ನೀರಿನಿಂದ ಹೊರ ತೆಗೆಯುವಲ್ಲಿ ಸಫಲರಾಗಿದ್ದಾರೆ. ಸ್ಥಳಕ್ಕೆ ಶಾಸಕ ಡಾ.ಮಂತರ್ ಗೌಡ, ಸೋಮವಾರಪೇಟೆ ತಹಶೀಲ್ದಾರ್ ಮೂರ್ತಿ, ಶನಿವಾರಸಂತೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸೋಮವಾರಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಸ್ಥಳದಲ್ಲಿ ಹಾಜರಿದ್ದ ಮೃತರ ಕುಟುಂಬಕ್ಕೆ ಶಾಸಕ ಡಾ.ಮಂತರ್ ಗೌಡ, ತಹಶೀಲ್ದಾರ್ ಮೂರ್ತಿ ಅವರು ಸಾಂತ್ವನ ಹೇಳಿದರು.

ಗುರುವಾರ ರಾತ್ರಿ ಶಿವರಾಜ್ ಹಾಗೂ ನಾಗರಾಜ್ ಅವರು ಮೀನು ಹಿಡಿಯಲು ನದಿಗೆ ತೆರಳಿದ್ದರು. ತಡ ರಾತ್ರಿಯಾದರೂ ಇಬ್ಬರು ಮನೆಗೆ ಮರಳಿರಲಿಲ್ಲ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಿನ್ನೀರು ಪ್ರದೇಶಕ್ಕೆ ತೆರಳಿದ ಸಂದರ್ಭ ನದಿ ದಡದಲ್ಲಿ ರೇನ್ ಕೋಟ್, ಮೀನು ಹಿಡಿಯುವ ಬಲೆ ಇರುವ ಒಂದು ಚೀಲ ಹಾಗೂ ಒಬ್ಬರ ಚಪ್ಪಲಿ ಮಾತ್ರವೇ ಪತ್ತೆಯಾಗಿತ್ತು. ಘಟನೆ ಕುರಿತು ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News