×
Ad

ಕೊಡಗು : ಕಾರಿನಲ್ಲಿ 10 ಕೋಟಿ ರೂ. ಮೌಲ್ಯದ ಅಂಬರ್‌ಗ್ರೀಸ್ ಸಾಗಿಸುತ್ತಿದ್ದ 9 ಮಂದಿಯ ಬಂಧನ

Update: 2025-04-10 18:34 IST

ಮಡಿಕೇರಿ: ಕೇರಳ ರಾಜ್ಯದಿಂದ ಅಕ್ರಮವಾಗಿ ಅಂದಾಜು 10 ಕೋಟಿ ರೂ. ಮೌಲ್ಯದ 10 ಕೆ.ಜಿ 390 ಗ್ರಾಂ ಅಂಬರ್‌ಗ್ರೀಸ್ (ತಿಮಿಂಗಲದ ವಾಂತಿ) ಅನ್ನು ಮಾರಾಟ ಮಾಡಲು ಸಾಗಿಸುತ್ತಿದ್ದ ವ್ಯಕ್ತಿಗಳನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ

ವಿರಾಜಪೇಟೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇರಳ ರಾಜ್ಯದ ತಿರುವನಂತಪುರಂನಿಂದ ಅಕ್ರಮವಾಗಿ ಅಂಬರ್‌ಗ್ರೀಸ್ (ತಿಮಿಂಗಲದ ವಾಂತಿ) ಅನ್ನು ಮಾರಾಟ ಮಾಡುವ ಸಲುವಾಗಿ ವಾಹನದಲ್ಲಿ ಸಾಗಿಸುತ್ತಿರುವ ಕುರಿತು ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದರು.

ಕೇರಳ ರಾಜ್ಯದ ತಿರುವನಂತಪುರಂನ ಶಂಶುದ್ದೀನ್.ಎಸ್, (45) ಎಂ.ನವಾಝ್, (54), ಕಣ್ಣೂರು ಜಿಲ್ಲೆಯ ವಿ.ಕೆ.ಲತೀಶ್ (53) ರಿಜೇಶ್.ವಿ. (40) ಪ್ರಶಾಂತ್.ಟಿ (52), ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ರಾಘವೇಂದ್ರ ಎ.ವಿ. (48) , ಕಾಸರಗೋಡಿನ ಬಾಲಚಂದ್ರ ನಾಯಕ್ (55), ಕಲ್ಲಿಕೋಟೆಯ ಸಾಜು ಥಾಮೋಸ್ (58), ಕಣ್ಣೂರಿನ ಜೋಬಿಸ್.ಕೆ.ಕೆ (33) ಹಾಗೂ ಜಿಜೇಸ್.ಎಂ, (40) ಬಂಧಿತ ಆರೋಪಿಗಳು.

ಬಂಧಿತರಿಂದ ಅಂದಾಜು 10 ಕೋಟಿ ರೂ. ಮೌಲ್ಯದ 10 ಕೆ.ಜಿ 390 ಗ್ರಾಂ ಅಂಬರ್‌ಗ್ರೀಸ್ (ತಿಮಿಂಗಲದ ವಾಂತಿ), ಎರಡು ನೋಟು ಎಣಿಸುವ ಯಂತ್ರ ಮತ್ತು ಎರಡು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.

ವಿರಾಜಪೇಟೆ ಡಿವೈಎಸ್‌ಪಿ ಮಹೇಶ್ ಕುಮಾರ್.ಎಸ್, ಸಿಪಿಐ ಅನೂಪ್ ಮಾದಪ್ಪ.ಪಿ, ಪಿಎಸ್‌ಐ ಪ್ರಮೋದ್.ಎಚ್.ಎಸ್, ವಿರಾಜಪೇಟೆ ಠಾಣಾ ಸಿಬ್ಬಂದಿಗಳು ಹಾಗೂ ಅಪರಾಧ ಪತ್ತೆ ಸಿಬ್ಬಂದಿಗಳ ತಂಡ ವಿರಾಜಪೇಟೆಯ ಬೆಟೋಳಿ ಗ್ರಾಮದ ಹೆಗ್ಗಳ ಜಂಕ್ಷನ್ ಬಳಿ ದಾಳಿ ನಡೆಸಿ ಆರೋಪಿಗಳನ್ನು ಮಾಲು ಸಹಿತ ವಶಕ್ಕೆ ಪಡೆದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ತಮ್ಮ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News