‘ಬಾಳೋ ಕೊಡವಾಮೆ’ ಬೃಹತ್ ಪಾದಯಾತ್ರೆ: 4ನೇ ದಿನವೂ ಭಾರೀ ಜನಸ್ತೋಮ
ಮಡಿಕೇರಿ: ಕೊಡಗಿನ ಕೊಡವರು ಹಾಗೂ ಕೊಡವ ಭಾಷಿಕ ಸಮುದಾಯದ ವಿಶಿಷ್ಟ, ಸಂಸ್ಕೃತಿ ಮತ್ತು ಪರಂಪರೆಗಳ ಸಂರಕ್ಷಣೆಯ ಮುಖ್ಯ ಧ್ಯೇಯದೊಂದಿಗೆ ದಕ್ಷಿಣ ಕೊಡಗಿನ ಕುಟ್ಟದಿಂದ ಆರಂಭಗೊಂಡಿರುವ ‘ಬಾಳೋ ಕೊಡವಾಮೆ’ ಬೃಹತ್ ಪಾದಯಾತ್ರೆ ನಾಲ್ಕನೇ ದಿನವೂ ಭಾರೀ ಜನಸ್ತೋಮದೊಂದಿಗೆ ಮಡಿಕೇರಿ ತಾಲ್ಲೂಕು ಗಡಿ ಬೇತ್ರಿಯನ್ನು ತಲುಪಿತು.
ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ ಇಂದು ಬೆಳಗ್ಗೆ ಬಿಟ್ಟಂಗಾಲದ ಹೆಗ್ಗಡೆ ಸಮಾಜದಿಂದ ಆರಂಭಗೊಂಡಿತು. ಸಹಸ್ರಾರು ಸಂಖ್ಯೆಯ ಸಮುದಾಯ ಬಾಂಧವರು ಸಾಂಪ್ರದಾಯಿಕ ಉಡುಪಿನೊಂದಿಗೆ ಅತ್ಯಂತ ಶಿಸ್ತುಬದ್ಧವಾಗಿ ಜಾಥದಲ್ಲಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದರು.
ನಾಲ್ಕನೇ ದಿನದ ಪಾದಯಾತ್ರೆ ಬಿಟ್ಟಂಗಾಲದಿಂದ ತಾಲ್ಲೂಕು ಕೇಂದ್ರ ವಿರಾಜಪೇಟೆ ಮೂಲಕ ಕದನೂರು, ಕಾಕೋಟುಪರಂಬುವನ್ನು ಹಾದು ಸಂಜೆ ಬೇತ್ರಿ ಗ್ರಾಮದಲ್ಲಿ ಕೊನೆಗೊಂಡಿತು. ಬೇತ್ರಿಯ ಕಾವೇರಿ ನದಿಗೆ ಅಡ್ಡಲಾಗಿ ಇರುವ ಸೇತುವೆಯಲ್ಲಿ ದಕ್ಷಿಣ ಕೊಡಗಿನಿಂದ ಆರಂಭಗೊಂಡ ಜಾಥವನ್ನು ಮಡಿಕೇರಿ ತಾಲ್ಲೂಕಿನ ಕೊಡವ ಸಮುದಾಯ ಬಾಂಧವರು ಸ್ವಾಗತಿಸಿದರು.
ಪಾದಯಾತ್ರೆಯ ಮೂಲಕ ಕೊಡವ ಸಮುದಾಯ ಬಾಂಧವರು ತಮ್ಮ ಜನಾಂಗದ ಅಸ್ತಿತ್ವ ಮತ್ತು ಭದ್ರತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರು. ಒಟ್ಟು 82 ಕಿ.ಮೀ.ಗಳಲ್ಲಿ ಇಲ್ಲಿಯವರೆಗೆ 42 ಕಿ.ಮೀ. ಪಾದಯಾತ್ರೆ ಪೂರ್ಣಗೊಂಡಿದೆ.
ಪಾದಯಾತ್ರೆ 5ನೇ ದಿನದಂದು ಬೇತ್ರಿಯಿಂದ ಆರಂಭಗೊಂಡು ಮೂರ್ನಾಡು, ಹಾಕತ್ತೂರು, ಕಗ್ಗೋಡ್ಲು ಮಾರ್ಗವಾಗಿ ಮೇಕೇರಿ ಗ್ರಾಮವನ್ನು ತಲುಪಲಿದೆ. ಆರನೇ ಹಾಗೂ ಕೊನೆಯ ದಿನವಾದ ಫೆ.7 ರಂದು ಬೆಳಗ್ಗೆ ಮೇಕೇರಿಯಿಂದ ಮಡಿಕೇರಿಗೆ ಆಗಮಿಸಲಿದೆ. ಬಳಿಕ ನಗರದ ಜ.ತಿಮ್ಮಯ್ಯ ಮೈದಾನದ ಆವರಣದಲ್ಲಿರುವ ಮಂದ್‍ನಲ್ಲಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಕೆಯೊಂದಿಗೆ ಸಮಾರೋಪಗೊಳ್ಳಲಿದೆ.