ಸಂವಿಧಾನಕ್ಕೆ ಬದ್ಧರಾಗಿ ಬದುಕೋಣ : ಸಚಿವ ಭೋಸರಾಜು ಕರೆ
ಮಡಿಕೇರಿ : ಸಂವಿಧಾನಕ್ಕೆ ಬದ್ಧವಾಗಿ ಬದುಕುವ ಮನೋಭೂಮಿಕೆ ಇಂದಿನ ತುರ್ತು ಅಗತ್ಯವಾಗಿದೆ. ಆಗ ಮಾತ್ರವೇ ಸಂವಿಧಾನದ ಶ್ರೇಷ್ಠ ಮೌಲ್ಯಗಳಾದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವಗಳಿಗೆ ನಿಜವಾದ ಅರ್ಥ ಬರುತ್ತದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರು ತಿಳಿಸಿದ್ದಾರೆ.
ಕೊಡಗು ಜಿಲ್ಲಾಡಳಿತ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿತ 76 ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣ ಗೈದು, ಪಥ ಸಂಚಲನದ ಗೌರವ ವಂದನೆ ಸ್ವೀಕರಿಸಿ ಸಚಿವರು ಸಂದೇಶ ನೀಡಿದರು.
ಪ್ರಜಾಪ್ರಭುತ್ವದ ತಳಹದಿಯಾದ ಸಂವಿಧಾನವನ್ನು ಹಾಗೂ ಮಾನವ ಹಕ್ಕುಗಳನ್ನು ನೀಡಿದ ಈ ಸುದಿನದ ನೆನಪು ಅವಿಸ್ಮರಣೀಯ. ಪ್ರಥಮವಾಗಿ ಪ್ರಜಾತಂತ್ರ ವ್ಯವಸ್ಥೆಯ ಬೇರಿಗೆ ನೀರು ಸುರಿದು ತಮ್ಮ ಬದುಕು ಸವೆಸಿದ ಎಲ್ಲಾ ದೇಶಾಭಿಮಾನಿ ಬಂಧುಗಳನ್ನು ಸ್ಮರಿಸಿಕೊಲ್ಳುವುದು ನಮ್ಮೆಲ್ಲದ ಆದ್ಯ ಕರ್ತವ್ಯ. ಸ್ವಾತಂತ್ರ್ಯದ ಹಣತೆ ಹಚ್ಚಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ನಿಜ ಮನುಷ್ಯತ್ವಕ್ಕಾಗಿ ಹಂಬಲಿಸಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಹರಿದು ಹಂಚಿಹೋಗಿದ್ದ ಒಕ್ಕೂಟಗಳನ್ನು ಒಗ್ಗೂಡಿಸಿ ಗಣರಾಜ್ಯ ವ್ಯವಸ್ಥೆಗೆ ಬುನಾದಿ ಹಾಕಿದ ‘ಉಕ್ಕಿನ ಮನುಷ್ಯ’ ಸರ್ಧಾರ್ ವಲ್ಲಭಬಾಯಿ ಪಟೇಲ್ ಹೀಗೆ ಸ್ವಾತಂತ್ರ್ಯದ ದೀವಿಗೆಯನ್ನು ಬೆಳಗಿದ ಪ್ರತಿಯೊಬ್ಬರು ನಮಗೆ ಆದರ್ಶರಾಗಿದ್ದಾರೆಂದು ನುಡಿದರು.
ಕರ್ನಾಟಕ ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಬಡವರ ಆರ್ಥಿಕ ಸಬಲೀಕರಣಕ್ಕೆ ಪ್ರಯತ್ನಿಸಿದೆಯೆಂದು ತಿಳಿಸಿದ ಸಚಿವರು, ಕೊಡಗು ಜಿಲ್ಲೆಯಲ್ಲಿ ಗಾಮೀಣ ರಸ್ತೆಗಳ ಅಭಿವೃದ್ದಿಗೆ ಹಾಗೂ ದುರಸ್ತಿಗೆ ಆದ್ಯತೆ ನೀಡಲಾಗುತ್ತಿದೆ. ಮಳೆಯಿಂದ ಹಾನಿಗೊಳಗಾದ ಗ್ರಾಮೀಣ ರಸ್ತೆಗಳಲ್ಲಿನ ಗುಂಡಿ ಮುಚ್ಚುವ ಕಾಮಗಾರಿಗಳಿಗೆ ಜಿಲ್ಲೆಗೆ ಒಟ್ಟು ರೂ. 439.93 ಲಕ್ಷಗಳು ಹಂಚಿಕೆಯಾಗಿದೆ. ಇದರಲ್ಲಿ 170 ರಸ್ತೆಗಳಲ್ಲಿನ ಗುಂಡಿ ಮುಚ್ಚುವ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆಯೆಂದು ಮಾಹಿತಿ ನೀಡಿದರು.
ಸ್ವಚ್ಛ ಭಾರತ್ ಮಿಷನ್- ಸ್ವಚ್ಛ ಭಾರತ್ ಮಿಷನ್‍ನಡಿ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಲು 102 ಗ್ರಾಮ ಪಂಚಾಯತ್‍ಗಳಿಗೆ ಸರ್ಕಾರದಿಂದ ಮಂಜೂರಾತಿ ದೊರೆತಿದೆ. ಮಡಿಕೇರಿ ತಾಲೂಕಿನ ಕೆ.ನಿಡಗಣೆ ಗ್ರಾಮ ಪಂಚಾಯ್ತಿಯಲ್ಲಿ ಗೋಬರ್ಧನ್ ಘಟಕ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆಯೆಂದರು.
ಕಾರ್ಯಕ್ರಮದಲ್ಲಿ ಶಾಸಕರಾದ ಡಾ.ಮಂತರ್ ಗೌಡ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಪ್ರೊಬೆಷನರಿ ಐಪಿಎಸ್ ಅಧಿಕಾರಿ ಬೆನಕ ಪ್ರಸಾದ್, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಗಣರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಪೊಲೀಸ್ ಸಶಸ್ತ್ರ ದಳ ಸೇರಿದಂತೆ 26 ತಂಡಗಳ ಆಕರ್ಷಕ ಪಥ ಸಂಚಲನ ಮತ್ತು 8 ಶಾಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಾಕರ್ಷಕವಾಗಿ ಮೂಡಿ ಬಂದಿತು.