ಪ್ರತಿಷ್ಠಿತ ‘ಬೂಕರ್’ ಪ್ರಶಸ್ತಿ ಹಂಚಿಕೊಂಡ ಅನುವಾದಕಿ ಕೊಡಗಿನ ದೀಪಾ ಭಸ್ತಿ
ಬಾನು ಮುಷ್ತಾಕ್/ದೀಪಾ ಭಸ್ತಿ | PC : PTI
ಮಡಿಕೇರಿ : ಕನ್ನಡದ ಹಿರಿಯ ಸಾಹಿತಿ ಬಾನು ಮುಷ್ತಾಕ್ ಅವರು ಬರೆದಿರುವ ಸಣ್ಣ ಕಥೆಗಳ ಸಂಗ್ರಹದ ‘ಹಾರ್ಟ್ ಲ್ಯಾಂಪ್’ ಈಗ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ‘ಹಸೀನಾ ಮತ್ತು ಇತರ ಕತೆಗಳು’ ಅನುವಾದ ಕೃತಿ ‘ಹಾರ್ಟ್ ಲ್ಯಾಂಪ್’ಗೆ ಅಂತರ್‌ರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ‘ಬೂಕರ್ ಪ್ರಶಸ್ತಿ’ ಲಭಿಸಿದ್ದು, ಇದರ ಅನುವಾದಕರು ಕೊಡಗು ಜಿಲ್ಲೆಯ ದೀಪಾ ಭಸ್ತಿ ಎನ್ನುವುದು ವಿಶೇಷ.
ಬಾನು ಮುಷ್ತಾಕ್ ಅವರ ‘ಹಸೀನಾ ಮತ್ತು ಇತರ ಕತೆಗಳು’ ಕಥಾ ಸಂಕಲನವನ್ನು ದೀಪಾ ಭಸ್ತಿ ಅವರು ಸತತ 4 ತಿಂಗಳ ಪರಿಶ್ರಮದ ಮೂಲಕ ಇಂಗ್ಲಿಷ್‌ಗೆ ಅನುವಾದ ಮಾಡಿದ್ದಾರೆ. ಮಡಿಕೇರಿ ನಗರದ ರೈಫಲ್ ರೇಂಜ್ ಬಡಾವಣೆಯಲ್ಲಿರುವ ತಮ್ಮ ಮನೆಯಲ್ಲೇ ಈ ಕಾರ್ಯ ಪೂರ್ಣಗೊಳಿಸಿದ್ದಾರೆ. ಬಾನು ಮುಷ್ತಾಕ್ ಅವರೊಂದಿಗೆ ದೀಪ ಭಸ್ತಿ ಅವರು ಇಂಗ್ಲೆಂಡ್‌ನಲ್ಲಿ ಮಂಗಳವಾರ ತಡ ರಾತ್ರಿ ‘ಬೂಕರ್ ಪ್ರಶಸ್ತಿ’ಯನ್ನು ಸ್ವೀಕರಿಸಿದರು.
ಪ್ರತಿಷ್ಠಿತ ಪ್ರಶಸ್ತಿ ಲಭಿಸಿದ ಕುರಿತು ಹರ್ಷ ವ್ಯಕ್ತಪಡಿಸಿದ ದೀಪಾ ಭಸ್ತಿ ಅವರ ತಂದೆ ಬಿ.ಎನ್.ಪ್ರಕಾಶ್, ತಮ್ಮ ಪುತ್ರಿಯ ಸಾಹಿತ್ಯ ಸೇವೆಯ ಆಸಕ್ತಿಯನ್ನು ವಿವರಿಸಿದರು. ‘ಇಂಗ್ಲಿಷ್‌ನಲ್ಲೇ ವ್ಯಾಸಂಗ ಮಾಡಿದ್ದ ದೀಪಾ, ಬಾನು ಮುಷ್ತಾಕ್ ಅವರ ಕಥಾ ಸಂಗ್ರಹವನ್ನು ಇಂಗ್ಲಿಷ್‌ಗೆ ಅನುವಾದಿಸುವ ಸಂದರ್ಭ ಮುಂಬೈನಲ್ಲಿ ನೆಲೆಸಿರುವ ಕನ್ನಡದ ಹಿರಿಯ ವಿದ್ವಾಂಸ ಡಾ.ತಾಳ್ತಜೆ ವಸಂತ ಕುಮಾರ್ ಅವರ ಮಾರ್ಗದರ್ಶನವನ್ನು ಪಡೆದುಕೊಂಡಿದ್ದರು. ಕನ್ನಡಕ್ಕೆ ಸರಿಸಮಾನವಾದ ಇಂಗ್ಲಿಷ್ ಪದಗಳ ಹುಡುಕಾಟದಲ್ಲಿ ತೊಡಗುತ್ತಿದ್ದರು. ತಡರಾತ್ರಿ 2-3 ಗಂಟೆಗಳವರೆಗೂ ಅನುವಾದದಲ್ಲಿ ಮುಳುಗಿ ಹೋಗುತ್ತಿದ್ದ ಪುತ್ರಿಯ ಶ್ರಮಕ್ಕೆ ಫಲ ಸಿಕ್ಕಿದೆ’ ಎಂದರು.
ಚೆನ್ನೈನಲ್ಲಿ ಮೂರು ವರ್ಷಗಳ ಕಾಲ ಪ್ರಾಥಮಿಕ ವಿದ್ಯಾಭ್ಯಾಸ, ಮಡಿಕೇರಿಯ ಕೊಡಗು ವಿದ್ಯಾಲಯದಲ್ಲಿ ಎಸೆಸೆಲ್ಸಿ, ವಿಜ್ಞಾನ ವಿಷಯದಲ್ಲಿ ಪಿಯುಸಿ ವ್ಯಾಸಂಗ ಮಾಡಿದ ದೀಪಾ ಭಸ್ತಿ, ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೆೇಜಿನಲ್ಲಿ ವಿಜ್ಞಾನದ ವಿಷಯದಿಂದ ಹೊರ ಬಂದು ಬಿ.ಕಾಂ. ಪದವಿಯನ್ನು ಪಡೆದರು. ನಂತರ ಪತ್ರಿಕೋದ್ಯಮದತ್ತ ಆಸಕ್ತರಾದರು. ಮಂಗಳೂರು ವಿವಿಯಲ್ಲಿ ಪತ್ರಿಕೋದ್ಯಮದಡಿ ಸ್ನಾತಕೋತ್ತರ ಪದವಿಯನ್ನು ಪಡೆದು ವಿವಿಧ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ ದೀಪಾ ಭಸ್ತಿ, ಮುಂದೆ ಕನ್ನಡ ಭಾಷಾ ಸಾಹಿತ್ಯ ಕೃತಿಗಳನ್ನು ಇಂಗ್ಲಿಷ್‌ಗೆ ಅನುವಾದಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರು.
ಮಡಿಕೇರಿಯ ರೈಫಲ್ ರೇಂಜ್ ನಿವಾಸಿಗಳಾದ ಬಿ.ಎನ್.ಪ್ರಕಾಶ್ ಹಾಗೂ ಸುಧಾ ದಂಪತಿಯ ಪುತ್ರಿ, ಕೊಡಗಿನ ಖ್ಯಾತ ವೈದ್ಯರಾಗಿದ್ದ ಡಾ.ನಂಜುಂಡೇಶ್ವರ ಅವರ ಮೊಮ್ಮಗಳು, ಸಿ.ಆರ್. ನಾಣಯ್ಯ ಅವರ ಪತ್ನಿ ದೀಪಾ ಭಸ್ತಿ ಅವರು ಅನುವಾದ ಕೃತಿಗಳ ಮೂಲಕ ಹೆಸರಾಗಿದ್ದಾರೆ. ಕನ್ನಡ ಸಾಹಿತ್ಯದ ಹಿರಿಯ ಚೇತನ ಡಾ.ಶಿವರಾಮ ಕಾರಂತ, ಸಣ್ಣ ಕಥೆಗಳ ಮೂಲಕ ಸಾಹಿತ್ಯ ವಲಯವನ್ನು ಪ್ರಭಾವಿಸಿದ್ದ ಕೊಡಗಿನ ಗೌರಮ್ಮ ಅವರ ಕೃತಿಗಳನ್ನು ಇಂಗ್ಲಿಷ್‌ಗೆ ಅನುವಾದ ಮಾಡಿದ್ದಾರೆ.
ಇದೀಗ ‘ಹಾರ್ಟ್ ಲ್ಯಾಂಪ್’ ಬೂಕರ್ ಪ್ರಶಸ್ತಿಗೆ ಪಾತ್ರವಾಗುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರದ ಶ್ರೀಮಂತಿಕೆಯನ್ನು ವಿಶ್ವದ ಮುಂದೆ ತೆರೆದಿಟ್ಟಿದೆ. ಕೃತಿಯನ್ನು ಅನುವಾದಿಸಿದವರು ಕೊಡಗಿನವರು ಎನ್ನುವ ಹೆಮ್ಮೆ ಸಾಹಿತ್ಯಾಸಕ್ತರಲ್ಲಿ ಮೂಡಿದೆ.