×
Ad

ಕೊಡಗು ವಿವಿ ಉಳಿಸುವ ಬಗ್ಗೆ ಸಿಎಂ ಜೊತೆ ಚರ್ಚೆ : ಸಚಿವ ದಿನೇಶ್ ಗುಂಡೂರಾವ್

Update: 2025-02-25 22:00 IST

ಕುಶಾಲನಗರ : ಕೊಡಗು ವಿಶ್ವ ವಿದ್ಯಾನಿಲಯ ಉಳಿಸಿ ಅಭಿವೃದ್ಧಿಗೊಳಿಸುವ ಸಂಬಂಧ ಸಂಪುಟದಲ್ಲಿ ಪ್ರಸ್ತಾವ ಮಾಡುವುದರೊಂದಿಗೆ ಮುಖ್ಯಮಂತ್ರಿ ಜೊತೆ ಚರ್ಚಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ರಾವ್ ಹೇಳಿದ್ದಾರೆ.

ಕನ್ನಡ ಸ್ನೇಹ ಸಿರಿ ಬಳಗದ ವತಿಯಿಂದ ಕರ್ನಾಟಕ ಸುವರ್ಣ ಸಂಭ್ರಮಾಚರಣೆ ಅಂಗವಾಗಿ ಕಳೆದ ಒಂದು ವರ್ಷದಿಂದ ಹಮ್ಮಿಕೊಂಡು ಬರಲಾದ ಕಾರ್ಯಕ್ರಮಗಳ 50ನೇ ಸಂಭ್ರಮಾಚರಣೆಯ ‘ಕುಶಲೋತ್ಸವ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಾಜ್ಯದಲ್ಲಿ ಕೆಲವು ವಿವಿಗಳ ನಿರ್ವಹಣೆ ಕೊರತೆ ಹಾಗೂ ಸ್ಥಳೀಯ ಜನರ ಇಚ್ಛಾಶಕ್ತಿ ಇಲ್ಲದ ಹಿನ್ನೆಲೆಯಲ್ಲಿ ವಿಲೀನಗೊಳಿಸುವ ಪ್ರಸ್ತಾವ ಇರುವುದಾಗಿ ತಿಳಿಸಿದ ಸಚಿವರು, ಕೊಡಗು ಜಿಲ್ಲೆಗೆ ವಿಶೇಷ ಆದ್ಯತೆಯೊಂದಿಗೆ ವಿವಿ ರದ್ದತಿ ಪ್ರಸ್ತಾವ ಕೈಬಿಡುವಂತೆ ತಿಳಿಸುವುದಾಗಿ ಭರವಸೆ ನೀಡಿದರು

ಪೊನ್ನಂಪೇಟೆ ತಾಲೂಕಿಗೆ ಶೀಘ್ರದಲ್ಲಿ ನೂತನ ತಾಲೂಕು ಆಸ್ಪತ್ರೆ ನಿರ್ಮಾಣದ ಬಗ್ಗೆ ಭರವಸೆ ನೀಡಿದ ಗುಂಡೂರಾವ್, ಸರಕಾರದ ಅನೇಕ ಕಾರ್ಯ ಯೋಜನೆಗಳು ಇಲಾಖೆ ಮೂಲಕ ನಡೆಯುತ್ತಿದ್ದು, ಕೊಡಗು ಜಿಲ್ಲೆಯ ಬಗ್ಗೆ ವಿಶೇಷ ಆಸಕ್ತಿ ವಹಿಸಲಾಗುವುದು ಎಂದರು.

ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಕೂಡಿಗೆ ಕ್ರೀಡಾ ಶಾಲೆಗೆ ಮಾಜಿ ಸಿಎಂ ಆರ್.ಗುಂಡೂರಾವ್ ಅವರ ಹೆಸರನ್ನು ಇಡುವಂತೆ ಪ್ರಸ್ತಾವಿಸಿದರು. ಈ ಸಂಬಂಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಪ್ರತಿಕ್ರಿಯಿಸಿದರು.

ಸಂಸದ ಯದುವೀರ್ ಒಡೆಯರ್ ಮಾತನಾಡಿ, ಕೊಡಗಿನ ಪ್ರಗತಿಗಾಗಿ ಕೇಂದ್ರ ಸರಕಾರದ ಮೂಲಕ ಯೋಜನೆಗಳನ್ನು ರೂಪಿಸಲಾಗಿದ್ದು, ಬಜೆಟ್‌ನಲ್ಲಿ ಪ್ರವಾಸೋದ್ಯಮಕ್ಕಾಗಿ ಹೆಚ್ಚಿನ ಒತ್ತು ನೀಡಲಾಗಿದೆ. ಜಿಲ್ಲೆಯ 50 ಸ್ಥಳಗಳನ್ನು ಗುರುತಿಸಿ ಅಭಿವೃದ್ಧಿಗೆ ಕಾರ್ಯ ಯೋಜನೆ ರೂಪಿಸಲಾಗುತ್ತಿದೆ. ಹೋಮ್ ಸ್ಟೇ ಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ, ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವುದು, ಕುಶಾಲನಗರದಲ್ಲಿ ಮಿನಿ ವಿಮಾನ ನಿಲ್ದಾಣ ನಿರ್ಮಾಣ ಮತ್ತಿತರ ವಿಷಯಗಳು ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ಪೂರಕ ಯೋಜನೆಗಳು ಬರಲಿವೆ ಎಂದರು.

ಕೊಡಗು ವಿವಿ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಸಂಸದರು, ಅದನ್ನು ಉಳಿಸಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಶಾಸಕರು, ಸಚಿವರು ಸರಕಾರದ ಮೂಲಕ ಪ್ರಯತ್ನ ನಡೆಸಬೇಕಾಗಿದೆ. ಜಿಲ್ಲೆಯಲ್ಲಿ ಹಿಂದುಳಿದ ಹಾಗೂ ಪರಿಶಿಷ್ಟ ಜಾತಿ ಪಂಗಡದ ಬಡ ಮಕ್ಕಳಿಗೆ ಕೊಡಗು ವಿವಿ ಅನುಕೂಲವಾಗಲಿದೆ ಎಂದು ಹೇಳಿದರು.

ಕನ್ನಡ ಸಿರಿ ಸ್ನೇಹ ಬಳಗದ ಜಿಲ್ಲಾ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬೆಳಗ್ಗೆ ಕಾವೇರಿ ಸೇತುವೆಯ ಬಳಿ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ತಹಶೀಲ್ದಾರ್ ಕಿರಣ್ ಜಿ.ಗೌರಯ್ಯ, ಡಿ ವೈಎಸ್ಪಿ ಗಂಗಾಧರಪ್ಪ ಮತ್ತಿತರ ಗಣ್ಯರು ಮೆರವಣಿಗೆಗೆ ಚಾಲನೆ ನೀಡಿದರು. ಕಳಸ ಹೊತ್ತ ಮಹಿಳೆಯರೊಂದಿಗೆ ಮೆರವಣಿಗೆ ಸಭಾಂಗಣಕ್ಕೆ ತಲುಪಿತು.

ಕಾರ್ಯಕ್ರಮದ ಹೊರ ಭಾಗದಲ್ಲಿ ತೆರೆಯಲಾದ ಪುಸ್ತಕ ಮತ್ತು ಕೃಷಿ ಉಪಕರಣಗಳ ಮಳಿಗೆಯನ್ನು ನಿವೃತ್ತ ಶಿಕ್ಷಕ ನಝೀರ್ ಅಹ್ಮದ್ ಉದ್ಘಾಟಿಸಿದರು. ಸಮಾರಂಭದಲ್ಲಿ ನಾಡಿಗೆ ಸೇವೆ ಸಲ್ಲಿಸಿದ ಗಣ್ಯರಿಗೆ ‘ಕುಶಲ ಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಚಿವ ದಿನೇಶ್ ಗುಂಡೂರಾವ್, ಹಿರಿಯರಾದ ವಿ.ಎನ್.ವಸಂತಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಮಾಜಿ ಸಿಎಂ ವೀರೇಂದ್ರ ಪಾಟೀಲ್ ಅವರ ಪುತ್ರ ಹಾಗೂ ಮಾಜಿ ಶಾಸಕ ಕೈಲಾಸ್ ನಾಥ್ ವೀರೇಂದ್ರ ಪಾಟೀಲ್, ಜಿಪಂ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ವಿ.ಎಸ್.ಎಸ್.ಎನ್.ಅಧ್ಯಕ್ಷ ಟಿ .ಆರ್.ಶರಣ ಕುಮಾರ್, ಉದ್ಯಮಿ ಎಂ.ಕೆ.ದಿನೇಶ್ ಮತ್ತಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕನ್ನಡ ಸಿರಿ ಸ್ನೇಹ ಬಳಗದ ಪ್ರಮುಖರಾದ ಎಂ.ಡಿ.ರಂಗಸ್ವಾಮಿ, ಕೆ.ಕೆ. ನಾಗರಾಜ ಶೆಟ್ಟಿ, ಉ.ರ.ನಾಗೇಶ್, ಶಿಕ್ಷಕರಾದ ಗಾಯತ್ರಿ, ಮಾಲಾಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಶಕ್ತಿ ಪತ್ರಿಕೆ ಉಪಸಂಪಾದಕ ಕುಡೆಕಲ್ ಸಂತೋಷ್ ಅಧ್ಯಕ್ಷತೆಯಲ್ಲಿ ನಡೆದ ಗೋಷ್ಠಿಯನ್ನು ಪ್ರಾಂಶುಪಾಲ ಪಿ.ಎಸ್.ಜಾನ್ ಕವಿತೆ ಹಾಡುವ ಮೂಲಕ ಚಾಲನೆ ನೀಡಿದರು. ಜಿಲ್ಲೆ ಸೇರಿದಂತೆ ನೆರೆ ಜಿಲ್ಲೆಯ ಸುಮಾರು 35ಕ್ಕೂ ಅಧಿಕ ಕವಿ-ಕವಯತ್ರಿಯರು ಈ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News