×
Ad

ಮಡಿಕೇರಿ | ಮಾದಕ ವಸ್ತು ಸಾಗಾಟ ಪ್ರಕರಣ : ಮೂವರು ಆರೋಪಿಗಳಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ

Update: 2024-02-04 19:35 IST

ಮಡಿಕೇರಿ: ನಿಷೇಧಿತ ಮಾದಕ ವಸ್ತುಗಳನ್ನು ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳಿಗೆ ಮಡಿಕೇರಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷಗಳ ಕಠಿಣ ಜೈಲು ಶಿಕ್ಷೆ , ತಲಾ 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ನಿವಾಸಿಗಳಾದ ಅಹಮದ್ ಕಬೀರ್(37), ಅಬ್ದುಲ್ ಖಾದರ್(37) ಹಾಗೂ ಮೊಹಮ್ಮದ್ ಮುಝಮ್ಮಿಲ್(37) ಎಂಬುವವರೇ ಶಿಕ್ಷೆಗೆ ಒಳಗಾದವರು.

ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2022ರ ಅ. 29ರಂದು ಭಾಗಮಂಡಲ-ಮಡಿಕೇರಿ ಜಂಕ್ಷನ್‍ನಲ್ಲಿರುವ ಐ.ಬಿ ರಸ್ತೆಯ ಹತ್ತಿರ ಕಾರಿನಲ್ಲಿ ಮೂವರು ನಿಷೇಧಿತ ಮಾದಕ ವಸ್ತುವನ್ನು ಮಾರಾಟ ಮಾಡುವ ಸಲುವಾಗಿ ಸಾಗಾಟ ಮಾಡುತ್ತಿದ್ದರು.

ಖಚಿತ ಮಾಹಿತಿ ಮೇರೆಗೆ ಭಾಗಮಂಡಲ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳು ದಾಳಿ ಮಾಡಿ ಕಾರನ್ನು ಪರಿಶೀಲನೆ ನಡೆಸಿದ ಸಂದರ್ಭ ಕಾರಿನಲ್ಲಿ 1 ಕೆ.ಜಿ. 160 ಗ್ರಾಂ ಹ್ಯಾಶಿಷ್ ಆಯಿಲ್ ಪತ್ತೆಯಾಗಿತ್ತು. ಬಳಿಕ ಕಾರಿನಲ್ಲಿದ್ದ ಮೂವರು ಆರೋಪಿಗಳನ್ನು ಎನ್‍ಡಿಪಿಎಸ್ ಕಾಯಿದೆಯಡಿಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ತನಿಖೆ ಪೂರ್ಣಗೊಳಿಸಿದ ತನಿಖಾಧಿಕಾರಿ ಪ್ರಿಯಾಂಕ 2022ರ ನವೆಂಬರ್ 21ರಂದು ಮಡಿಕೇರಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳಿಗೆ ಎನ್‍ಡಿಪಿಎಸ್ ಕಾಯಿದೆ ಅಡಿಯಲ್ಲಿ 10 ವರ್ಷ ಕಠಿಣ ಜೈಲು ಶಿಕ್ಷೆ ಪ್ರಕಟಿಸಿದೆ. ಮಾತ್ರವಲ್ಲದೇ ಪ್ರತಿ ಆರೋಪಿಗೆ ತಲಾ 1 ಲಕ್ಷ ರೂ. ದಂಡ ವಿಧಿಸಿದ್ದು, ದಂಡ ನೀಡಲು ತಪ್ಪಿದ್ದಲ್ಲಿ ಮತ್ತೆ 3 ವರ್ಷಗಳ ಜೈಲು ಶಿಕ್ಷೆ ಅನುಭವಿಸುವಂತೆ ತೀರ್ಪು ನೀಡಿದೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಕೆ.ಜಿ.ಅಶ್ವಿನಿ ಅವರು ವಾದ ಮಂಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News