×
Ad

ಕೊಡಗು | ಬೆಳ್ಳಂಬೆಳಗ್ಗೆ ಕ್ಯಾಂಟೀನ್ ಮೇಲೆ ಕಾಡಾನೆ ದಾಳಿ

Update: 2025-01-21 11:46 IST

ಸೋಮವಾರಪೇಟೆ : ಮರಿಯೊಂದಿಗಿದ್ದ ಕಾಡಾನೆಯೊಂದು ಕ್ಯಾಂಟೀನ್ ಮೇಲೆ ದಾಳಿ ಮಾಡಿದ ಘಟನೆ ಸೋಮವಾರಪೇಟೆ ತಾಲೂಕಿನ ನೆಲ್ಲಿಹುದಿಕೇರಿಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಕ್ಯಾಂಟೀನ್ ನಡೆಸುತ್ತಿದ್ದ ದಂಪತಿ ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ನೆಲ್ಲಿಹುದಿಕೇರಿ ಸಮೀಪದ ಅತ್ತಿಮಂಗಲ ತೋಟದಿಂದ ಮರಿಯೊಂದಿಗೆ ರಸ್ತೆ ದಾಟುತ್ತಿದ್ದ ಕಾಡಾನೆ ಏಕಾಏಕಿ ಪಕ್ಕದಲ್ಲಿದ್ದ ಕ್ಯಾಂಟೀನ್ ಮೇಲೆ ದಾಳಿ ಮಾಡಿದೆ. ಕ್ಯಾಂಟೀನ್ ನಲ್ಲಿದ್ದ ವಸ್ತುಗಳು, ಪೀಠೋಪಕರಣಗಳು ಮತ್ತು ತಿಂಡಿ ತನಿಸುಗಳನ್ನು ಎಳೆದು ಬಿಸಾಡಿದ ಕಾಡಾನೆ ಪಕ್ಕದ ಬಸ್ ತಂಗುದಾಣದಲ್ಲಿದ್ದ ಗ್ರಾಮಸ್ಥರ ಕಿರುಚಾಟ ಕೇಳಿ ಅಲ್ಲಿಂದ ಕಾಲ್ಕಿತ್ತಿದೆ. ನಂತರ ನಲ್ವತ್ತೆಕ್ಕರೆ ಗ್ರಾಮದ ಮಾರ್ಗವಾಗಿ ಸಂಚಾರ ಬೆಳೆಸಿದ ಕಾಡಾನೆ ಕಾರೊಂದರ ಮೇಲೂ ದಾಳಿ ನಡೆಸಲು ಯತ್ನಿಸಿದೆ ಎಂದು ತಿಳಿದು ಬಂದಿದೆ.

ಕ್ಯಾಂಟೀನ್ ನಲ್ಲಿದ್ದ ಜಬ್ಬಾರ್ ಹಾಗೂ ಅವರ ಪತ್ನಿ ಕಾಡಾನೆ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ. ಈ ಸಂದರ್ಭ ಜಬ್ಬಾರ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಬೆಳ್ಳಂಬೆಳಗ್ಗೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಗೂ ಕಾರ್ಮಿಕರು ಆತಂಕಗೊಂಡರು. ಅರಣ್ಯ ಇಲಾಖೆ ತಕ್ಷಣ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News