ಕೊಡಗು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ ಕಟ್ಟೆಮಾಡು ದೇವಾಲಯ ಸಮಿತಿ
ಮಡಿಕೇರಿ: ಎರಡು ಸಮುದಾಯಗಳ ನಡುವಿನ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿರುವ ಮಡಿಕೇರಿ ತಾಲೂಕಿನ ಕಟ್ಟೆಮಾಡು ಗ್ರಾಮದ ಶ್ರೀ ಮಹಾಮೃತ್ಯುಂಜಯ ಮಹದೇಶ್ವರ ದೇವಾಲಯದ ಕಟ್ಟುಪಾಡಿನ ಕುರಿತು ಮರಗೋಡು ಗ್ರಾಮದಲ್ಲಿ ನಡೆಸಿದ ಅಭಿಪ್ರಾಯ ಸಂಗ್ರಹದ ಸಭೆಯ ವರದಿಯನ್ನು ದೇವಾಲಯದ ಆಡಳಿತ ಮಂಡಳಿ ಇಂದು ಜಿಲ್ಲಾಡಳಿಕ್ಕೆ ಸಲ್ಲಿಸಿತು.
ಜಿಲ್ಲಾಧಿಕಾರಿಯವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದೇವಾಲಯ ಸಮಿತಿಯ ಅಧ್ಯಕ್ಷ ಕಟ್ಟೆಮನೆ ಶಶಿ ಜನಾರ್ದನ ಅವರು, ಸಭೆಯಲ್ಲಿ ವ್ಯಕ್ತವಾದ ಪರ, ವಿರೋಧ ಅಭಿಪ್ರಾಯಗಳನ್ನು ಬೈಲಾದೊಂದಿಗೆ ಜಿಲ್ಲಾಧಿಕಾರಿಗೆ ಸಲ್ಲಿಸಿರುವುದಾಗಿ ತಿಳಿಸಿದರು.
ಜಿಲ್ಲಾಧಿಕಾರಿಗೆ ನೀಡಿರುವ ವರದಿಯಲ್ಲಿ ಮುಖ್ಯವಾಗಿ ಹಾಲಿ ಇರುವ ಬೈಲಾವನ್ನು ಯಥಾಸ್ಥಿತಿ ಮುಂದುವರಿಸಿಕೊಂಡು ಹೋಗಬೇಕು ಮತ್ತು ಯಾವುದೇ ಸೇರ್ಪಡೆಯಾಗದಿರಲಿ ಎಂದು ವಿವರಿಸಲಾಗಿದೆ. ಬೈಲಾದಲ್ಲಿ ಯಾವುದೇ ಜನಾಂಗದ ಸಂಪ್ರದಾಯ, ಪದ್ಧತಿಗೆ ಅವಕಾಶ ಇರುವುದಿಲ್ಲ ಎಂಬುವುದನ್ನು ಮಾತ್ರ ನಮೂದಿಸಲಾಗಿದೆ. ದೇವಾಲಯ ಸಮಿತಿ ಹಾಲಿ ಇರುವ ಬೈಲಾಕ್ಕೆ ಬದ್ಧವಾಗಿರಲು ನಿರ್ಧರಿಸಿದ್ದು, ಊರಿನವರ ಅಪೇಕ್ಷೆಯಂತೆ ಜಿಲ್ಲಾಡಳಿತ ಸೂಕ್ತ ಆದೇಶವನ್ನು ನೀಡಲಿದೆ ಎನ್ನುವ ವಿಶ್ವಾಸವಿದೆ. ಜಿಲ್ಲಾಧಿಕಾರಿಯವರು ಹೊರಡಿಸುವ ಆದೇಶಕ್ಕೆ ಸಮಿತಿ ಬದ್ಧವಾಗಿದೆ ಎಂದು ಶಶಿ ಜನಾರ್ದನ ಸ್ಪಷ್ಟಪಡಿಸಿದರು.
ಜಿಲ್ಲಾಡಳಿತದ ಅಂಗಳದಲ್ಲಿ ಚೆಂಡು:
ಕಳೆದ 45 ದಿನಗಳಿಂದ ವಿವಾದದ ಕೇಂದ್ರ ಬಿಂದುವಾಗಿರುವ ಶ್ರೀ ಮಹಾಮೃತ್ಯುಂಜಯ ಮಹದೇಶ್ವರ ದೇವಾಲಯ ವ್ಯಾಪ್ತಿಯಲ್ಲಿ ಮಾ.13 ರವರೆಗೆ ನಿರ್ಬಂಧಕಾಜ್ಞೆ ಜಾರಿಯಲ್ಲಿದೆ. ವಾರ್ಷಿಕ ಜಾತ್ರಾ ಮಹೋತ್ಸವದ ಡಿ.27 ರಂದು ವಸ್ತ್ರ ಸಂಹಿತೆ ಕುರಿತು ಉಂಟಾದ ಭಿನ್ನಾಭಿಪ್ರಾಯದ ನಂತರ ದೇವಾಲಯದಲ್ಲಿ ನಿತ್ಯ ಪೂಜೆ ಮಾತ್ರ ನಡೆಯುತ್ತಿದೆ. ನಿರ್ಬಂಧಕಾಜ್ಞೆ ಹಿನ್ನೆಲೆ ಐದಕ್ಕಿಂತ ಹೆಚ್ಚು ಮಂದಿ ಸೇರಲು ಸಾಧ್ಯವಾಗದ ಕಾರಣ ಯಾವುದೇ ವಿಶೇಷ ಆಚರಣೆಗಳಿಗೆ ಅವಕಾಶ ಇಲ್ಲದಾಗಿದೆ. ಭಿನ್ನಾಭಿಪ್ರಾಯ ಶಮನಗೊಳಿಸಲು ಸೂಕ್ತ ನಿರ್ಧಾರಕ್ಕೆ ಬರುವಂತೆ ಜಿಲ್ಲಾಡಳಿತ ದೇವಾಲಯ ಸಮಿತಿಗೆ ಎರಡು ಬಾರಿ ಕಾಲಾವಕಾಶ ನೀಡಿತ್ತು.