ಕೊಡಗಿನಲ್ಲಿ ಗಾಳಿ ಮಳೆಯಿಂದ ಮತ್ತೆ ಹಾನಿ : ಮುರಿದು ಬಿದ್ದ 800 ವಿದ್ಯುತ್ ಕಂಬಗಳು
ಮಡಿಕೇರಿ : ಕಳೆದ ಒಂದು ವಾರದಿಂದ ಬಿರುಗಾಳಿ ಸಹಿತ ಮಳೆಯಾಗುತ್ತಿದ್ದ ಕೊಡಗು ಜಿಲ್ಲೆಯಲ್ಲಿ ಇಂದು ಸಾಧಾರಣ ಮಳೆಯೊಂದಿಗೆ ಕೊಂಚ ಬಿಸಿಲಿನ ವಾತಾವರಣವಿತ್ತು. ಆದರೆ ಗಾಳಿಯ ರಭಸ ಮುಂದುವರಿದಿರುವುದರಿಂದ ಕೆಲವು ಭಾಗಗಳಲ್ಲಿ ಮರ ಬಿದ್ದು ನಷ್ಟ ಉಂಟಾಗಿದೆ.
ಮಡಿಕೇರಿ ತಾಲ್ಲೂಕಿನ ದೇವಸ್ತೂರು ಗ್ರಾಮದ ಕುಕ್ಕೇರ ಚಿಮ್ಮ ಎಂಬುವವರಿಗೆ ಸೇರಿದ ಮನೆ ಮತ್ತು ಕಾರಿನ ಮೇಲೆ ಬೃಹತ್ ಮರ ಬಿದ್ದು ಅಪಾರ ನಷ್ಟ ಸಂಭವಿಸಿದೆ. ಆದರೆ ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಮಡಿಕೇರಿ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಮರ ಬಿದ್ದ ಪರಿಣಾಮ ವಿದ್ಯುತ್ ಮಾರ್ಗಕ್ಕೆ ಹಾನಿ ಉಂಟಾಗಿದೆ. ನೂರಾರು ಮನೆಗಳು ವಿದ್ಯುತ್ ಸಂಪರ್ಕ ಕಳೆದುಕೊಂಡು ನಾಲ್ಕು ದಿನಗಳೇ ಕಳೆದಿದೆ.
ಕೊಡಗು ಜಿಲ್ಲೆಯಲ್ಲಿ ಕಳೆದ ಆರು ದಿನಗಳ ಕಾಲ ಸುರಿದ ಬಿರುಗಾಳಿ ಸಹಿತ ಮಳೆಗೆ 800 ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಚೆಸ್ಕಾಂಗೆ ಅಪಾರ ನಷ್ಟ ಉಂಟಾಗಿದೆ. ಮರ ಮತ್ತು ಮರದ ರೆಂಬೆಕೊಂಬೆಗಳು ಕೂಡ ವಿದ್ಯುತ್ ಮಾರ್ಗದ ಮೇಲೆ ಬಿದ್ದು ಹಾನಿಯಾಗಿದೆ. ಬಹುತೇಕ ಎಲ್ಲಾ ಕಡೆ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಮಡಿಕೇರಿ ಹಾಗೂ ಸೋಮವಾರಪೇಟೆ ತಾಲ್ಲೂಕಿನ ಬಹುತೇಕ ಕಡೆ ಬೀಸುತ್ತಿರುವ ಭಾರೀ ಗಾಳಿಯಿಂದ ಚೆಸ್ಕಾಂ ಇಲಾಖೆಯ ಸಿಬ್ಬಂದಿಗಳ ದುರಸ್ತಿ ಕಾರ್ಯಾಚರಣೆಗೆ ತೀವ್ರ ಹಿನ್ನಡೆಯಾಗುತ್ತಿದೆ.
ವಿದ್ಯುತ್ ಮಾರ್ಗದ ಮರುಜೋಡಣೆ ಕಾರ್ಯ ಕಳೆದ ಐದು ದಿನಗಳಿಂದ ಬಾಕಿ ಇದ್ದು, ಸಿಬ್ಬಂದಿಗಳು ಶ್ರಮಿಸುತ್ತಲೇ ಇದ್ದಾರೆ. ಆದಷ್ಟು ಶೀಘ್ರ ವಿದ್ಯುತ್ ಮಾರ್ಗಗಳನ್ನು ದುರಸ್ತಿ ಪಡಿಸಿ ಗ್ರಾಮಸ್ಥರಿಗೆ ವಿದ್ಯುತ್ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸೆಸ್ಕ್ ಕಾರ್ಯಪಾಲಕ ಅಭಿಯಂತರರು ಸ್ಪಷ್ಟಪಡಿಸಿದ್ದಾರೆ.
ಮಳೆ ವಿವರ :
ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ ಮಳೆ 2116.12 ಮಿ.ಮೀ ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 2113.55 ಮಿ.ಮೀ ಮಳೆ ಸುರಿದಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ 3165.92 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 2877.27 ಮಿ.ಮೀ. ಮಳೆಯಾಗಿತ್ತು. ವಿರಾಜಪೇಟೆ ತಾಲ್ಲೂಕಿನಲ್ಲಿ 1926.55 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1944.10 ಮಿ.ಮೀ. ಮಳೆಯಾಗಿತ್ತು. ಪೊನ್ನಂಪೇಟೆ ತಾಲ್ಲೂಕಿನಲ್ಲಿ 2009.04 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 2056.70 ಮಿ.ಮೀ. ಮಳೆಯಾಗಿತ್ತು. ಸೋಮವಾರಪೇಟೆ ತಾಲ್ಲೂಕಿನಲ್ಲಿ 2403.27 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 2425.21 ಮಿ.ಮೀ. ಮಳೆಯಾಗಿತ್ತು. ಕುಶಾಲನಗರ ತಾಲ್ಲೂಕಿನಲ್ಲಿ 1075.79 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1264.50 ಮಿ.ಮೀ. ಮಳೆಯಾಗಿತ್ತು.