Virajpet | ಹಲ್ಲೆಯಿಂದ ಬಾಲಕ ಸಾವು : ಆರೋಪಿಯ ಬಂಧನ
ಸಾಂದರ್ಭಿಕ ಚಿತ್ರ | PC : Image by fabrikasimf on Magnific
ಮಡಿಕೇರಿ : ವ್ಯಕ್ತಿಯೊಬ್ಬನಿಂದ ತೀವ್ರ ಹಲ್ಲೆಗೊಳಗಾದ 4 ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ವಿರಾಜಪೇಟೆ ಪಟ್ಟಣದ ಚಿಕ್ಕಪೇಟೆಯ ಲೈನ್ ಮನೆಯಲ್ಲಿ ನಡೆದಿದೆ.
ಲೈನ್ ಮನೆಯಲ್ಲಿ ವಾಸವಿದ್ದ ಸುಚಿತ್ರ ಎಂಬುವವರ ಪುತ್ರ ಚರಣ್ (4) ಮೃತ ಬಾಲಕನಾಗಿದ್ದಾನೆ. ಹಲ್ಲೆ ನಡೆಸಿದ ಆರೋಪದಡಿ ಸುಚಿತ್ರಳ ಸಂಬಂಧಿ ಪ್ರತಾಪ್ (40) ನನ್ನು ವಿರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.
ಪ್ರತಾಪ್ ಹಾಗೂ ಸುಚಿತ್ರ ಸಂಬಂಧಿಗಳಾಗಿದ್ದು, ಸುಚಿತ್ರ ವಾಸವಿದ್ದ ಚಿಕ್ಕಪೇಟೆಯ ಲೈನ್‍ಮನೆಗೆ ಆ.12ರಂದು ಪ್ರತಾಪ್ ಬಂದಿದ್ದಾನೆ. ಅಂದು ಸಂಜೆ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಕಲಹ ನಡೆದಿದೆ. ಈ ಸಂದರ್ಭ ಪ್ರತಾಪ್ ಬಾಲಕ ಚರಣ್ ಮೇಲೆ ತೀವ್ರ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಬಾಲಕ ಕುಸಿದು ಬಿದ್ದು ಮೃತಪಟ್ಟಿದ್ದಾನೆ ಎಂದು ಆರೋಪಿಸಲಾಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ, ವಿರಾಜಪೇಟೆ ವೃತ್ತ ನೀರಿಕ್ಷಕ ಅನೂಪ್ ಮಾದಪ್ಪ, ಗ್ರಾಮಾಂತರ ಠಾಣಾಧಿಕಾರಿ ಜೆ.ಎನ್.ಲತಾ, ನಗರ ಠಾಣೆಯ ಕಾವೇರಪ್ಪ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ತಿಳಿಸಿದರು.