Madikeri | ವಾಯು ವಿಹಾರ ಮಾಡುತ್ತಿದ್ದ ಇಬ್ಬರಿಗೆ ಕಾರು ಡಿಕ್ಕಿ : ಓರ್ವ ಸಾವು

Update: 2026-08-22 18:36 IST

ಮಡಿಕೇರಿ  : ರಾತ್ರಿ ವೇಳೆ ವಾಯು ವಿಹಾರದಲ್ಲಿ ತೊಡಗಿದ್ದ ಇಬ್ಬರು ಪಾದಚಾರಿಗಳಿಗೆ ಕಾರು ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಓರ್ವ ಮೃತಪಟ್ಟಿದ್ದು, ಮತ್ತೋರ್ವನಿಗೆ ಗಂಭೀರ ಗಾಯಗಳಾದ ಘಟನೆ ಕೂಡಿಗೆ ಕಾವೇರಿ ನದಿ ಸೇತುವೆ ಮೇಲೆ ಶುಕ್ರವಾರ ರಾತ್ರಿ ನಡೆದಿದೆ.

ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೂರ್ಣಚಂದ್ರ ಬಡಾವಣೆ ನಿವಾಸಿ ಬಸವಯ್ಯ ಅವರ ಪುತ್ರ ರವಿ(38) ಮೃತ ವ್ಯಕ್ತಿ. ರಾಮಕೃಷ್ಣ ಹಾಗೂ ಶಾರದಾ ದಂಪತಿ ಪುತ್ರ ರೂಪೇಶ್(28) ಎಂಬುವವರಿಗೆ ತಲೆಗೆ ತೀವ್ರ ಪೆಟ್ಟಾಗಿದ್ದು, ಕುಶಾಲನಗರ ಆರೋಗ್ಯ ಸಮುದಾಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಸ್ಥಳಾಂತರಿಸಲಾಗಿದೆ. ಡಿಕ್ಕಿ ಮಾಡಿ ಕಾರು ಚಾಲಕ ಕಾರು ಸಹಿತ ಪರಾರಿಯಾಗಿದ್ದಾನೆ.

ಈ ಕುರಿತು ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಸುತ್ತಮುತ್ತಲಿನ ಸಿ.ಸಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಿ  ಪರಾರಿಯಾದ ಆರೋಪಿ ಸಹಿತ ವಾಹನವನ್ನು ವಶಕ್ಕೆ ಪಡೆಯಲು ತನಿಖೆ ಆರಂಭಿಸಿದ್ದಾರೆ.

ಗ್ರಾಮಸ್ಥರ ಪ್ರತಿಭಟನೆ

ಪರಾರಿಯಾದ ವಾಹನ ಚಾಲಕನನ್ನು ಬಂಧಿಸಿ ತಮ್ಮ ಮುಂದೆ ಕರೆಸಬೇಕು.  ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುವಿಗೆ ತಕ್ಷಣವೇ ಸೂಕ್ತ ಆರ್ಥಿಕ ಸಹಾಯ ಒದಗಿಸಬೇಕೆಂದು ಗ್ರಾಮದ ಮುಖಂಡರು ಹಾಗೂ ಕುಟುಂಬಸ್ಥರು ಕುಶಾಲನಗರ ಗ್ರಾಮಾಂತರ ಸಂಚಾರಿ ಪೊಲೀಸ್ ಠಾಣೆ ಮುಂಭಾಗ ಮೃತದೇಹವಿಟ್ಟು ಪ್ರತಿಭಟನೆ ನಡೆಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News