ಕುಶಾಲನಗರ : ಶಾಲೆಯ ಗೇಟ್‌ ಬಿದ್ದು 4 ವರ್ಷದ ಮಗು ಮೃತ್ಯು

Update: 2026-08-07 23:52 IST

ಕುಶಾಲನಗರ: ಶಾಲಾ ಕಾಂಪೌಂಡ್ ನಿಂದ ಗೇಟ್ ಕಳಚಿ ಬಿದ್ದು ಮಗುವೊಂದು ಸಾವನ್ನಪ್ಪಿದ ಘಟನೆ ಕುಶಾಲನಗರ ಸಮೀಪದ ಬಸವನಹಳ್ಳಿ ಹಾಡಿಯಲ್ಲಿ ನಡೆದಿದೆ.

ಬಸವನಹಳ್ಳಿ ಹಾಡಿಯ ಸತೀಶ ಮತ್ತು ಪವಿತ್ರ ದಂಪತಿಯ ಪುತ್ರಿ ಅಪೂರ್ವ (4) ಮೃತ ಮಗು. ಮಗುವಿನ ಸಹೋದರಿ ಮನೆಯ ಸಮೀಪ ಇರುವ ಗಿರಿಜನ ಆಶ್ರಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಮಗು ಪ್ರತಿ ದಿನ ಸಹೋದರಿಯ ಶಾಲೆಯ ಗೇಟ್ ಬಳಿ ಬರುವುದು, ಆಟವಾಡುವುದು ವಾಡಿಕೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಇದೇ ರೀತಿ ಶುಕ್ರವಾರ ಸಂಜೆ ವೇಳೆ ಗೇಟ್ ಬಳಿ ಬಂದಾಗ ಶಿಥಿಲವಾಗಿದ್ದ ಕಾಂಪೌಂಡ್ ನಿಂದ ಬೃಹತ್ ಕಬ್ಬಿಣದ ಗೇಟ್ ಗೋಡೆ ಸಹಿತ ಕಳಚಿ ಬಿದ್ದು ಮಗುವಿನ ತಲೆ ಮೇಲೆ ಬಿದ್ದು ತೀವ್ರ ಗಾಯಗೊಂಡ ಪರಿಣಾಮ ಮಗು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಸ್ಥಳಕ್ಕೆ ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಗಿರಿಜನ ಮುಖಂಡ ಆರ್.ಕೆ.ಚಂದ್ರ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಕ್ಷೇತ್ರ ಶಾಸಕ ಡಾ ಮಂತರ್ ಗೌಡ ದೂರವಾಣಿ ಮೂಲಕ ಮೃತ ಮಗುವಿನ ಪೋಷಕರನ್ನು ಸಂಪರ್ಕಿಸಿ ಸಾಂತ್ವನ ಹೇಳಿದರು.

ಈ ಸಂದರ್ಭ ಜಿಲ್ಲಾ ಐಟಿಡಿಪಿ ಯೋಜನಾ ಸಮನ್ವಯಾಧಿಕಾರಿ ಭಾಗೀರಥಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದೇಗೌಡ, ತಹಸೀಲ್ದಾರ್ ಕೃಷ್ಣಮೂರ್ತಿ ಸೇರಿದಂತೆ ಸ್ಥಳೀಯ ಮುಖಂಡರಾದ ಚಂದ್ರಶೇಖರ್, ನಂಗಾರು ಜಗ, ಮಹೇಶ್, ಗುಡ್ಡೆಹೊಸೂರು ಗ್ರಾಪಂ ಪಿಡಿಒ ಸುಮೇಶ್, ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News