ಕೊಡಗು ಜಿಲ್ಲೆಯಲ್ಲಿ ಗಾಳಿ ಸಹಿತ ಭಾರೀ ಮಳೆ : ಮನೆಗಳಿಗೆ ಹಾನಿ
ಮಡಿಕೇರಿ : ಕೊಡಗು ಜಿಲ್ಲೆಯಾದ್ಯಂತ ಗಾಳಿ ಸಹಿತ ಭಾರೀ ಮಳೆಯಾಗುತ್ತಿದ್ದು, ವಿವಿಧೆಡೆ ಮನೆಗಳಿಗೆ ಹಾನಿಯಾಗಿದೆ. ತೋಟದ ಲೈನ್ ಮನೆ ಕುಸಿದ ಪರಿಣಾಮ ಮಗುವೊಂದು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿದ್ದಾಪುರ ಸುತ್ತಮುತ್ತ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕಾಫಿ ತೋಟದ ಲೈನ್ ಮನೆಯೊಂದು ಕುಸಿದು ಬಿದ್ದ ಪರಿಣಾಮ ಮಗು ಅರ್ಜುನ (3) ಸಿಲುಕಿಕೊಂಡು ಗಾಯಗೊಂಡಿದ್ದಾನೆ. ಗಾಯಗೊಂಡ ಮಗುವಿಗೆ ಸಿದ್ದಾಪುರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ನಸುಕಿನ ವೇಳೆ ಈ ಘಟನೆ ಸಂಭವಿಸಿದ್ದು, ಕಾರ್ಮಿಕ ಕುಟುಂಬ ತಕ್ಷಣ ಎಚ್ಚೆತ್ತುಕೊಂಡ ಪರಿಣಾಮ ಉಳಿದವರು ಅಪಾಯದಿಂದ ಪಾರಾಗಿದ್ದಾರೆ. ಲೈನ್ ಮನೆಯಲ್ಲಿ ಜಾರ್ಖಂಡ್ ಮೂಲದ ಐವರು ಕಾರ್ಮಿಕರು ವಾಸವಾಗಿದ್ದರು.
ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಾಪೋಕ್ಲು ಹೋಬಳಿಯ ಎಮ್ಮೆಮಾಡು ಗ್ರಾಮದ ಅಬ್ದುಲ್ ಅಫೀಲ್ ಅವರ ವಾಸದ ಮನೆಯ ಪಕ್ಕದಲ್ಲೇ ಬರೆ ಕುಸಿದು ಬಿದ್ದಿದೆ. ಸಂಪಾಜೆ ಹೋಬಳಿಯ ಚೆಂಬು ಗ್ರಾ.ಪಂ ವ್ಯಾಪ್ತಿಯ ದಬ್ಬಡ್ಕ ಗ್ರಾಮದ ಮುಕ್ಕಾಟಿ ತಮ್ಮಯ್ಯ ಎಂಬುವವರ ಮನೆಯ ಕೊಟ್ಟಿಗೆಗೆ ಮರ ಬಿದ್ದು ಹಾನಿಯಾಗಿದೆ.
ಮಡಿಕೇರಿ ತಾಲ್ಲೂಕಿನಲ್ಲಿ ಗಾಳಿಯ ರಭಸ ಹೆಚ್ಚಾಗಿದ್ದು, ಮಳೆಯೂ ತೀವ್ರತೆಯನ್ನು ಪಡೆದುಕೊಂಡಿರುವುದರಿಂದ ಎತ್ತರದ ಮತ್ತು ತಗ್ಗು ಪ್ರದೇಶದ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ.