×
Ad

ಮಡಿಕೇರಿ | ನಾಪತ್ತೆಯಾಗಿದ್ದ ಪಿಯುಸಿ ವಿದ್ಯಾರ್ಥಿಯ ಮೃತದೇಹ ಪತ್ತೆ

Update: 2025-02-13 17:44 IST

ಎಂ.ಅಮಿತ್(17)

ಮಡಿಕೇರಿ : ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಡಿಕೇರಿ ತಾಲ್ಲೂಕಿನ ಗಾಳಿಬೀಡು ಗ್ರಾಮದ ಪಿಯುಸಿ ವಿದ್ಯಾರ್ಥಿ ಎಂ.ಅಮಿತ್(17)ನ ಮೃತದೇಹ ಸಮೀಪದ ಕೂಟುಹೊಳೆಯಲ್ಲಿ ಗುರುವಾರ ಪತ್ತೆಯಾಗಿದೆ.

ಖಾಸಗಿ ವಿದ್ಯಾಸಂಸ್ಥೆಯ ಸಿಬ್ಬಂದಿ ಆನಂದ್ ಎಂಬುವವರ ಪುತ್ರ ಎಂ.ಎ.ಅಮಿತ್ ಫೆ.11ರಂದು ಬೆಳಗ್ಗೆ 7 ಗಂಟೆಗೆ ಶಾಲಾ ಆವರಣದಲ್ಲಿರುವ ಸಿಬ್ಬಂದಿಗಳ ವಸತಿ ಗೃಹದಿಂದ ಶಾಲೆಗೆಂದು ತೆರಳಿದಾತ ಮುಖ್ಯದ್ವಾರದ ಮೂಲಕ ರಸ್ತೆಯತ್ತ ಸಾಗಿದ್ದಾನೆ ಎಂದು ತಿಳಿದು ಬಂದಿತ್ತು.

ಇದನ್ನು ಗಮನಿಸಿದ ವಿದ್ಯಾಸಂಸ್ಥೆಯ ರಕ್ಷಣಾ ಸಿಬ್ಬಂದಿಯೊಬ್ಬರು, ಆನಂದ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣ ಆನಂದ್ ಸ್ಥಳಕ್ಕೆ ಆಗಮಿಸಿದರಾದರೂ, ಪುತ್ರನ ಪತ್ತೆಯಾಗಿರಲಿಲ್ಲ. ಬಳಿಕ ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.

ವಿದ್ಯಾಸಂಸ್ಥೆಯ ಬಳಿಯಲ್ಲೇ ಮಡಿಕೇರಿ ನಗರಕ್ಕೆ ನೀರು ಸರಬರಾಜು ಮಾಡುವ ಕೂಟುಹೊಳೆ ಜಲಾಗಾರವಿದೆ. ಇದರ ಹಿನ್ನೇರಿನ ದಡದಲ್ಲಿ ವಿದ್ಯಾರ್ಥಿ ಅಮಿತ್‍ನ ಚಪ್ಪಲಿಗಳು ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು. ಇದೀಗ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದೆ.

ಘಟನೆಗೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News