Madikeri | ಬೆತ್ತಲೆಗೊಳಿಸಿ ಹಣಕ್ಕಾಗಿ ಬೇಡಿಕೆ ಆರೋಪ; ಇಬ್ಬರು ಪೊಲೀಸ್ ವಶಕ್ಕೆ, ನಾಲ್ವರು ನಾಪತ್ತೆ
ಮಡಿಕೇರಿ : ಫೇಸ್ ಬುಕ್ ಗೆಳತಿಯ ಮನೆಗೆ ಬಂದ ವ್ಯಕ್ತಿಯನ್ನು ಬೆತ್ತಲೆಗೊಳಿಸಿ, ಹಲ್ಲೆ ನಡೆಸಿ ಹಣಕ್ಕಾಗಿ ಪೀಡಿಸಿದ ಆರೋಪದಡಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿರುವ ಘಟನೆ ಶನಿವಾರ ನಡೆದಿದೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ವ್ಯಾಪಾರಿಯೊಬ್ಬರು ಆರು ಮಂದಿಯ ವಿರುದ್ಧ ಮಡಿಕೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ರಚನಾ ಹಾಗೂ ಆಕೆಯ ತಾಯಿ ಮಾಲತಿ ಎಂಬವರನ್ನು ವಶಕ್ಕೆ ಪಡೆದಿದ್ದು, ನಾಲ್ವರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.
ವ್ಯಾಪಾರಿಗೆ ರಚನಾ ಅವರೊಂದಿಗೆ ಫೇಸ್ ಬುಕ್‌ನಲ್ಲಿ ಪರಿಚಯವಾಗಿದ್ದು, ನಂತರ ಹಣದ ಅವಶ್ಯವಿದೆ ಎಂದು ಹೇಳಿ ನ.20ರಂದು ಮತ್ತು ನ.28ರಂದು ಆನ್‌ಲೈನ್ ಮೂಲಕ ತಲಾ 5 ಸಾವಿರ ರೂ.ಯನ್ನು ಪಡೆದುಕೊಂಡಿದ್ದಾಳೆ. ವ್ಯಾಪಾರಿಯು ಹಣವನ್ನು ವಾಪಸ್ ಕೇಳಿದಾಗ ರಚನಾ ಮೈಸೂರು ಅಥವಾ ಕುಶಾಲನಗರಕ್ಕೆ ಬಾ ಎಂದು ಹೇಳಿದ್ದಾಳೆ. ನಂತರ ಡಿ.12ರಂದು ಮಡಿಕೇರಿಗೆ ಬರಮಾಡಿಕೊಂಡು ರಾತ್ರಿ 10:30 ರ ವೇಳೆಗೆ ಮಂಗಳಾದೇವಿ ನಗರದ ಮನೆಗೆ ಕರೆದುಕೊಂಡು ಹೋಗಿದ್ದಾಳೆ ಎನ್ನಲಾಗಿದೆ.
ಮನೆಯಲ್ಲಿ ಇಬ್ಬರೇ ಇರುವಾಗ ರಾತ್ರಿ 11:45 ಗಂಟೆಗೆ ರಚನಾಳ ತಾಯಿ ಮಾಲತಿ ಹಾಗೂ ದಿನೇಶ್ ಎಂಬಾತ ಆಟೊದಲ್ಲಿ ಮನೆಗೆ ಬಂದಿದ್ದಾನೆ. ಹಣದ ಬಗ್ಗೆ ಇವನನ್ನು ನಾನು ವಿಚಾರಿಸಿಕೊಳ್ಳುತ್ತೇನೆ ಎಂದ ದಿನೇಶ್, ನೀವು ಹೋಗಿ ಎಂದು ರಚನಾ ಹಾಗೂ ಅವರ ತಾಯಿಯನ್ನು ಮನೆಯಿಂದ ಕಳುಹಿಸಿದ್ದಾನೆ. ನಂತರ ದಿನೇಶನು ಫೋನ್ ಮಾಡಿ ಸುಜಿತ್ ಹಾಗೂ ದರ್ಶನ್ ಎಂಬವರನ್ನು ಮನೆಗೆ ಕರೆಸಿಕೊಂಡಿದ್ದಾರೆ. ನಂತರ ಮೂವರು ಕೈಗಳಿಂದ, ದೊಣ್ಣೆಯಿಂದ ಮತ್ತು ಕತ್ತಿಯ ಹಿಡಿಯಿಂದ ಮುಖಕ್ಕೆ, ಬಾಯಿಗೆ, ಎಡ ಎದೆಯ ಭಾಗಕ್ಕೆ ಹಾಗೂ ಎಡ ಕಾಲಿನ ಮಂಡಿಗೆ ಹೊಡೆದು ನೋವುಪಡಿಸಿದ್ದಾರೆ. ನನ್ನ ಮೊಬೈಲ್ ಫೋನ್ ಕಿತ್ತುಕೊಂಡು, ನಾನು ಧರಿಸಿದ್ದ ಬಟ್ಟೆಯನ್ನು ಬಲವಂತವಾಗಿ ಬಿಚ್ಚಿಸಿ ಬೆತ್ತಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಮೊಬೈಲ್‌ಗಳಿಂದ ಬೆತ್ತಲೆ ವೀಡಿಯೊ ಮಾಡಿಕೊಂಡು, ಒಳ ಉಡುಪನ್ನು ಧರಿಸಲು ನೀಡಿದ್ದಾರೆ. ನಂತರ ಸುಜಿತ್ ಎಂಬಾತ ಏರ್ ಗನ್ ಅನ್ನು ನನ್ನ ತಲೆಗೆ ಇಟ್ಟು ಬೆದರಿಸಿ 50 ಲಕ್ಷ ಹಣ ನೀಡು, ಇಲ್ಲದಿದ್ದರೆ ನಿನ್ನ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಹೇಳಿ ಬೆದರಿಕೆ ಹಾಕಿದ್ದಾನೆ. ಮನೆಯಲ್ಲಿ ಬೆಳಗ್ಗಿನವರೆಗೆ ಬಲವಂತವಾಗಿ ಕೂಡಿಹಾಕಿ, ರಕ್ತವಾಗಿದ್ದ ಶರ್ಟ್, ಬನಿಯನ್ ಮತ್ತು ಕರ್ಚೀಪ್ ಅನ್ನು ಮನೆಯೊಳಗೆ ಸುಟ್ಟು ಹಾಕಿದ್ದಾರೆ ಎಂದು ವ್ಯಾಪಾರಿಯು ದೂರಿನಲ್ಲಿ ತಿಳಿಸಿದ್ದಾರೆ.