Madikeri | ಪೌರಕಾರ್ಮಿಕರನ್ನು ನಿಂದಿಸಿದ ಆರೋಪ : 7 ದಿನಗಳಲ್ಲಿ ವರದಿ ಸಲ್ಲಿಸಲು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಸೂಚನೆ
ಮಡಿಕೇರಿ : ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಮನೆ ಮನೆ ಕಸ ಸಂಗ್ರಹಣೆ ಕಾರ್ಯದಲ್ಲಿ ತೊಡಗಿರುವ ಪೌರಕಾರ್ಮಿಕರನ್ನು ನಿವೃತ್ತ ಅಧಿಕಾರಿಯೊಬ್ಬರು ನಿಂದಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ತುರ್ತು ಪರಿಶೀಲನೆ ನಡೆಸಿ, ನಿಯಮಾನುಸಾರ ಕ್ರಮ ಕೈಗೊಂಡು 7 ದಿನಗಳೊಳಗಾಗಿ ವರದಿ ಸಲ್ಲಿಸುವಂತೆ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಸೂಚಿಸಿದೆ.
ಈ ಕುರಿತು ಆಯೋಗದ ಸಂಶೋಧನಾಧಿಕಾರಿಗಳು ಮಡಿಕೇರಿ ನಗರಸಭೆ ಪೌರಾಯುಕ್ತರಿಗೆ ಪತ್ರ ಬರೆದಿದ್ದಾರೆ.
ನಗರಸಭೆಯ ಕಸ ಸಂಗ್ರಹಣೆ ವಾಹನದ ಚಾಲಕರು ಸ್ಥಳೀಯ ಸಾರ್ವಜನಿಕರೊಬ್ಬರಿಗೆ ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ನೀಡುವಂತೆ ತಿಳಿಸಿದ್ದರು. ಈ ವೇಳೆ ಸಾರ್ವಜನಿಕರು, “ನಾನು ಕಸವನ್ನು ವಿಂಗಡಿಸುವುದಿಲ್ಲ. ಅದು ನಿಮ್ಮ ಕೆಲಸ. ಸಫಾಯಿ ಕರ್ಮಚಾರಿಗಳಾಗಿ ಇರುವುದು ನಿಮ್ಮ ಕರ್ಮ” ಎಂದು ನಿಂದಿಸಿರುವುದಾಗಿ ಆರೋಪಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅದು ಆಯೋಗದ ಗಮನಕ್ಕೆ ಬಂದಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಘಟನೆಯ ಕುರಿತು ತುರ್ತು ಪರಿಶೀಲನೆ ನಡೆಸಿ, ಅಗತ್ಯ ನಿಯಮಾನುಸಾರ ಕ್ರಮ ಕೈಗೊಂಡು 7 ದಿನಗಳೊಳಗಾಗಿ ವರದಿಯನ್ನು ಆಯೋಗಕ್ಕೆ ಸಲ್ಲಿಸುವಂತೆ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರು ನಿರ್ದೇಶಿಸಿರುವುದಾಗಿ ತಿಳಿಸಲಾಗಿದೆ.
ಪೌರ ಕಾರ್ಮಿಕರ ನಿಂದನೆ
ನಗರಸಭೆಯ ಪೌರ ಕಾರ್ಮಿಕರು ಮಡಿಕೇರಿ ನಗರದ ವಿವಿಧ ಬಡಾವಣೆಗಳಲ್ಲಿ ಕಸ ಸಂಗ್ರಹಿಸುತ್ತಿದ್ದ ಸಂದರ್ಭ ನಿವೃತ್ತ ಅಧಿಕಾರಿಯೊಬ್ಬರು ಸಫಾಯಿ ಕರ್ಮಚಾರಿಗಳ ಕುರಿತು ನಿಂದಿಸಿರುವ ವಿಡಿಯೋ ಇತ್ತೀಚೆಗೆ ಎಲ್ಲೆಡೆ ವೈರಲ್ ಆಗಿತ್ತು. ಹಸಿ ಕಸ ಮತ್ತು ಒಣ ಕಸವನ್ನು ವಿಂಗಡಿಸಿ ನೀಡುವಂತೆ ಕಸದ ವಾಹನದ ಚಾಲಕ ಮನವಿ ಮಾಡಿಕೊಂಡಾಗ ಇದಕ್ಕೆ ಒಪ್ಪದ ನಿವೃತ್ತ ಅಧಿಕಾರಿ ಕಸವನ್ನು ಬೇರ್ಪಡಿಸಿ ನೀಡಲು ಸಾಧ್ಯವಿಲ್ಲ, ನಾವು ಸಸ್ಯಹಾರಿಗಳು, ನಾವು ಒಂದು ಬಾರಿ ಹಾಕಿದ ಕಸಕ್ಕೆ ಮತ್ತೆ ಕೈಹಾಕುವುದಿಲ್ಲ ಎಂದು ಹೇಳಿದ್ದಾರೆ.
ಈ ಸಂದರ್ಭ ನೀವು ಹಾಕಿದ ಕಸವನ್ನು ಪೌರ ಕಾರ್ಮಿಕರು ಕೈಯಿಂದ ಮುಟ್ಟಬಹುದೆ ಎಂದು ಚಾಲಕ ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರ ನೀಡಿದ ನಿವೃತ್ತ ಅಧಿಕಾರಿ “ಅವರು ಮಾಡಿದ ಕರ್ಮಕ್ಕೆ ಸಫಾಯಿ ಕರ್ಮಚಾರಿಗಳಾಗಿ ಹುಟ್ಟಿದ್ದಾರೆ, ಅವರ ಕೆಲಸ ಅವರು ಮಾಡಬೇಕು. ನಾನು ವಿದ್ಯಾವಂತನಾಗಿದ್ದೇನೆ, ಗೆಜೆಟೆಟ್ ಆಫೀಸರ್ ಆಗಿ ನಿವೃತ್ತಿಯಾಗಿದ್ದೇನೆ” ಎಂದು ಪೌರ ಕಾರ್ಮಿಕರನ್ನು ನಿಂದಿಸಿರುವ ವಿಡಿಯೋ ವೈರಲ್ ಆಗಿತ್ತು. ಈ ಪ್ರಕರಣವನ್ನು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಗಂಭೀರವಾಗಿ ಪರಿಗಣಿಸಿದೆ.