MADIKERI | ಕಾಡಾನೆ ದಾಳಿಗೆ ಸಿಲುಕಿ ವ್ಯಕ್ತಿ ಮೃತ್ಯು
ಮಡಿಕೇರಿ, ಜ.1: ಕಾಡಾನೆ ದಾಳಿಗೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸೋಮವಾರಪೇಟೆ ತಾಲೂಕಿನ ಗಣಗೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಗಯ್ಯಪುರ ಗ್ರಾಮದಲ್ಲಿ ನಡೆದಿದೆ.
ಸಂಗಯ್ಯಪುರ ಗ್ರಾಮದ ನಿವಾಸಿ ಪೊನ್ನಪ್ಪ(62) ಮೃತಪಟ್ಟವರು. ಇವರು ಮನೆಯ ಮುಂಭಾಗದಲ್ಲಿರುವ ಜಮೀನಿಗೆ ಕೆಲಸಕ್ಕೆಂದು ತೆರಳಿದಾಗ ಏಕಾಏಕಿ ಕಾಡಾನೆ ದಾಳಿ ಮಾಡಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಎಸಿಎಫ್ ಗೋಪಾಲ್, ಆರ್ಎಫ್ಒ ಶೈಲೇಂದ್ರ, ಡಿಆರ್ಎಫ್ ಶ್ರವಣ ಕುಮಾರ್, ಸಿಬ್ಬಂದಿಗಳಾದ ಈರಣ್ಣ, ವೆಂಕಟೇಶ್, ಪ್ರವೀಣ್ ಕುಮಾರ್, ರಂಜಿತ್, ವೇದಮೂರ್ತಿ, ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ಹಾಗೂ ವೃತ್ತ ನೀರಿಕ್ಷಕರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾಡಾನೆ ಉಪಟಳ ಮಿತಿಮೀರಿರುವ ಕುರಿತು ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಾಡಾನೆ ದಾಳಿ ತಡೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮಸ್ಥರು ಪ್ರತಿಭಟನೆಗೆ ಮುಂದಾದಾಗ ಅರಣ್ಯ ಅಧಿಕಾರಿಗಳು ಆನೆ ಕಂದಕ ಮತ್ತು ಸೋಲಾರ್ ಬೇಲಿ ನಿರ್ಮಾಣದ ಭರವಸೆ ನೀಡಿದರು.