ಮಡಿಕೇರಿ | ಗಾಂಜಾ ಮಾರಾಟ ಆರೋಪ : ಇಬ್ಬರು ಪೊಲೀಸ್ ವಶಕ್ಕೆ
Update: 2024-06-03 17:05 IST
ಪ್ರಶಾಂತ್/ಬೋಪಯ್ಯ
ಮಡಿಕೇರಿ : ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.
ಆರೋಪಿಗಳಾದ ಅಭ್ಯತ್ ಮಂಗಲ ನಿವಾಸಿ ಪ್ರಶಾಂತ್.ಎಚ್.ಕೆ (32) ಹಾಗೂ ಎಂ.ಬಾಡಗ ನಿವಾಸಿ ಬೋಪಯ್ಯ ಎ.ಎಸ್ (31) ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ. 419.93 ಗ್ರಾಂ ಗಾಂಜಾ, ಕೃತ್ಯಕ್ಕೆ ಬಳಸಿದ 2 ಮೊಬೈಲ್ ಮತ್ತು 1 ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಮೂರ್ನಾಡು ನಗರದ ಕುಂಬಳದಾಳು ರಸ್ತೆಯಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಸರಬರಾಜು ಮತ್ತು ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ದೊರೆತ ಹಿನ್ನೆಲೆ ಪೊಲೀಸರು ದಾಳಿ ನಡೆಸಿದರು.
ಮಡಿಕೇರಿ ಉಪವಿಭಾಗದ ಡಿವೈಎಸ್‍ಪಿ ಮಹೇಶ್ ಕುಮಾರ್, ಮಡಿಕೇರಿ ಗ್ರಾಮಾಂತರ ಪಿಐ ಉಮೇಶ್.ಯು, ಪಿಎಸ್‍ಐಗಳಾದ ಶ್ರೀನಿವಾಸಲು, ರಮೇಶ್ ಕರಕಿಕಟ್ಟಿ ಹಾಗೂ ಸಿಬ್ಬಂದಿಗಳ ವಿಶೇಷ ತಂಡ ತನಿಖೆ ನಡೆಸಿ ಕಾರ್ಯಾಚರಣೆ ನಡೆಸಿತು.