×
Ad

ಮೈಸೂರು | ಬಾಳೆ ತೋಟದಲ್ಲಿ ಮಹಿಳೆಯ ಮೃತದೇಹ ಪತ್ತೆ

Update: 2024-08-24 20:41 IST

ಮೈಸೂರು : ಬಾಳೆ ತೋಟದಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾದ  ಘಟನೆ ನಂಜನಗೂಡು ತಾಲ್ಲೂಕಿನ ಗಟ್ಟವಾಡಿ ಗ್ರಾಮದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಶಶಿಕಲಾ (38) ಎಂದು ಗುರುತಿಸಲಾಗಿದೆ. ಶಶಿಕಲಾ ಇದೇ ಗ್ರಾಮದ ನಂಜುಂಡಪ್ಪ ಎಂಬುವವರ ತೋಟದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ. ಈ ಸಂಬಂಧ ಮೃತ ಮಹಿಳೆ ಸಹೋದರ ಮಹದೇವಯ್ಯ ʼನನ್ನ ಅಕ್ಕನನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆʼ ಎಂದು ಕವಲಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮೃತ ಶಶಿಕಲಾ, ನಂಜುಂಡಪ್ಪ ಅವರ ತೋಟಕ್ಕೆ ಕೆಲಸಕ್ಕೆಂದು ಆ.23ರಂದು ಹೋಗಿದ್ದವರು ಮನೆಗೆ ವಾಪಾಸ್ ಆಗಿರಲಿಲ್ಲ. ಬಳಿಕ ತೋಟದ ಮಾಲೀಕ ನಂಜುಂಡಯ್ಯ ದೂರವಾಣಿ ಕರೆ ಮಾಡಿ ʼನಿಮ್ಮ ಅಕ್ಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆʼ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ದಲಿತ ಸಂಘಟನೆಗಳ ಪ್ರತಿಭಟನೆ: ಮೃತ ಮಹಿಳೆ ಶಶಿಕಲಾ ಅವರನ್ನು ಅತ್ಯಾಚಾರ ಮಾಡಿ ನಂಜುಂಡಪ್ಪ ಕೊಲೆ ಮಾಡಿದ್ದಾನೆ. ಆತನನ್ನು ಕೂಡಲೇ ಬಂಧಿಸಬೇಕು ಎಂದು ದಲಿತ ಸಂಘಟನೆಗಳವರು ಪ್ರತಿಭಟನೆ ನಡೆಸಿದ್ದಾರೆ.

ಶಶಿಕಲಾ ನೇಣು ಬಿಗಿದು ಕೊಂಡಿದ್ದರೂ ಕಾಲುಗಳು ನೆಲಕ್ಕೆ ತಾಗುತ್ತಿವೆ. ಪಕ್ಕದಲ್ಲಿ ಕಬ್ಬಿಣದ ರಾಡ್, ದೊಣ್ಣೆ, ಚಾಪೆ, ದಿಂಬು ಬಿದ್ದಿದೆ.‌ ಇದನ್ನು ನೋಡಿದರೆ ಆಕೆ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಈ ಸಂಬಂಧ ಕವಲಂದೆ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ತೋಟದ ಮಾಲೀಕ ನಂಜುಂಡಪ್ಪ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News